
ಸುವರ್ಣ ವಿಧಾನಸೌಧ (ಬೆಳಗಾವಿ) : ‘ಉತ್ತರ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮತ್ತು ಕೈಗಾರಿಕೆಗಳ ಬೇಡಿಕೆಗೆ ಅನುಸಾರವಾಗಿ ಉತ್ತಮ ತರಬೇತಿ ಹೊಂದಿರುವ ಮಾನವ ಸಂಪನ್ಮೂಲ ಒದಗಿಸಲು ಮತ್ತು ಈ ಭಾಗದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗುವಂತೆ ಮಾಡಲು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು’ ಎಂದು ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಹೇಳಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಈ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಮುಂಬರುವ ಬಜೆಟ್‍ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡುವ ನಿರೀಕ್ಷೆಯಿದೆ’ ಎಂದೂ ಹೇಳಿದರು.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿ, ರಸ್ತೆ, ಸಾರಿಗೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಅಂಕಿಅಂಶಗಳ ಸಹಿತ ತೆರೆದಿಟ್ಟ ಅವರು, ‘ಉತ್ತರ ಕರ್ನಾಟಕದ 14 ಜಿಲ್ಲೆಗಳು ಅತ್ಯಂತ ಒಣ ಪ್ರದೇಶ ಹೊಂದಿವೆ. ಸಾಕ್ಷರತೆಯಲ್ಲಿ ರಾಜ್ಯದ ಸರಾಸರಿ 75.36 ಇದ್ದರೆ, ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಮಾಣ 65 ಕ್ಕಿಂತ ಕಡಿಮೆ ಇದೆ‘ ಎಂದರು.
ರಾಜ್ಯದವರಿಗೆ ಐಐಟಿಯಲ್ಲಿ ಶೇ 50 ಮೀಸಲು ಕಲ್ಪಿಸಲು ಸಹಕಾರ ನೀಡುವಂತೆ ವಿರೋಧ ಪಕ್ಷದ ಸದಸ್ಯರಿಗೆ ಮನವಿ ಮಾಡಿದ ಅವರು, ‘ಧಾರವಾಡದಲ್ಲಿ ಐಐಟಿ ಆರಂಭಿಸಲು ರಾಜ್ಯದಿಂದ ಕೇಂದ್ರಕ್ಕೆ ₹2 ಸಾವಿರ ಕೋಟಿ ಭೂಮಿಯನ್ನು ಉಚಿತವಾಗಿ ಕೊಟ್ಟಿದ್ದೇವೆ. ಬೇರೆ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಾಗಿ ಇಲ್ಲಿ ಪ್ರವೇಶ ಪಡೆಯುತ್ತಾರೆ. ರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಚರ್ಚೆಯಲ್ಲಿ ಕಾಂಗ್ರೆಸ್‌ನ ಜೆ.ಎನ್.ಗಣೇಶ್, ಯಾಸಿರ್ ಅಹಮದ್ ಪಠಾಣ್, ನಾ.ರಾ.ಭರತ್ ರೆಡ್ಡಿ, ಬಿಜೆಪಿಯ ಕೃಷ್ಣಾ ನಾಯಕ್, ಉಮೇಶ್ ಜಾಧವ್ ಮತ್ತು ಇತರರು ಭಾಗವಹಿಸಿದ್ದರು.
ಎರಡು ವರ್ಷಗಳಲ್ಲಿ ಚರ್ಚೆ ನಡೆಸಿ ನೀಡಿದ್ದ ಭರವಸೆಗಳಲ್ಲಿ ಎಷ್ಟು ಈಡೇರಿವೆ ಎಷ್ಟು ಈಡೇರಿಲ್ಲ ಎಂಬ ಬಗ್ಗೆ ಬೆಳಕು ಚೆಲ್ಲಬೇಕು. ಈಡೇರದಿರಲು ಕಾರಣ ತಿಳಿಸಬೇಕುಕೆ.ಎನ್.ರಾಜಣ್ಣ ಕಾಂಗ್ರೆಸ್
ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಜಿಲ್ಲೆ ಅತಿ ಹಿಂದುಳಿದ ಜಿಲ್ಲೆ. ಇಲ್ಲಿ ಕ್ಯಾನ್ಸರ್ ರೋಗ ಹೆಚ್ಚಳವಾಗಿದೆ. ಈ ಭಾಗದ ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ.ಕರೆಮ್ಮ , ಜೆಡಿಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.