
ಸಾವು (ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ/ಹಾವೇರಿ/ದಾಂಡೇಲಿ/ಮಾನ್ವಿ/ಶಹಬಾದ್: ಉತ್ತರ ಕರ್ನಾಟಕದ ವಿವಿಧೆಡೆ ಗುರುವಾರ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಲೋಕಾಪುರ ಸಮೀಪದ ಜಾಲಿಕಟ್ಟಿ ಕೆ.ಡಿ.ಗ್ರಾಮದ ಸಹೋದರ ಸಂಬಂಧಿಗಳಾದ ಪ್ರಮೋದ ಮಹಾಂತೇಶ ಬಡಿಗೇರ (18), ಮನೋಜ ಮಂಜುನಾಥ ಬಡಿಗೇರ (18) ಮೃತಪಟ್ಟಿದ್ದಾರೆ.
‘ಗಣಿಗಾರಿಕೆ ವೇಳೆ ತೋಡಲಾಗಿದ್ದ ಆಳವಾದ ತಗ್ಗಿನಲ್ಲಿ ನೀರು ಶೇಖರಣೆ ಆಗಿತ್ತು. ಅದರ ಬದಿಯಲ್ಲಿ ನಿಂತು ಸ್ನಾನ ಮಾಡುತ್ತಿದ್ದ ವೇಳೆ ತಗ್ಗಿನಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾರೆ’ ಎಂದು ಲೋಕಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹಾವೇರಿ ತಾಲ್ಲೂಕಿನ ಮಣ್ಣೂರು ಗ್ರಾಮದ ಬಳಿ ವರದಾ ನದಿಯಲ್ಲಿ ಮುಳುಗಿ ಬಸವರಾಜ ಅಂಗಡಿ (22) ಎಂಬುವರು ಮೃತಪಟ್ಟಿದ್ದಾರೆ. ಎತ್ತುಗಳ ಮೈತೊಳೆಯಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಗುತ್ತಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮೌಳಂಗಿ ಸಮೀಪದ ಕಾಳಿ ನದಿಯ ಸಂಗಮ ಪ್ರದೇಶದಲ್ಲಿ ಗೆಳೆಯರೊಂದಿಗೆ ಸ್ನಾನಕ್ಕೆ ತೆರಳಿದ್ದ ನವಾಝ್ ನಾಯ್ಕ (18) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ನಿಮಿತ್ತ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ನೀರುಪಾಲಾಗಿದ್ದಾರೆ.
ಮೃತ ಯುವಕನನ್ನು ಮಾನ್ವಿ ಪಟ್ಟಣದ ವಂಶಿ ರೆಡ್ಡಿ ರಾಜಲದಿನ್ನಿ (28) ಎಂದು ಗುರುತಿಸಲಾಗಿದೆ. ವಂಶಿ ರೆಡ್ಡಿ ಅವರು ಸ್ನಾನಕ್ಕಾಗಿ ನೀರಿಗೆ ಇಳಿದಾಗ ಮುಳುಗಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.ವಿಷಯ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು.
ವಿದ್ಯಾರ್ಥಿ ಸಾವು: ಕಲಬುರಗಿ ಜಿಲ್ಲೆಯ ಶಹಾಬಾದ್‌ನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಕಾಗಿಣಾ ನದಿಯಲ್ಲಿ ಈಜಲು ಹೋದ ಹನುಮಾನ ನಗರದ ನಿವಾಸಿ ವೆಂಕಟೇಶ (16) ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿ ಬಾಲಕನ ಮೃತದೇಹವನ್ನು ಶಹಾಬಾದ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವರ ತಂದೆ–ತಾಯಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.