ADVERTISEMENT

ಪ್ರಧಾನ ಮಂತ್ರಿಗೆ ಮನವಿ ಮಾಡಿದರೂ ಒಂದು ಪೈಸೆಯೂ ಸಿಕ್ಕಿಲ್ಲ: ಜಿ. ಪರಮೇಶ್ವರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2024, 6:07 IST
Last Updated 7 ಫೆಬ್ರುವರಿ 2024, 6:07 IST
ಡಾ. ಜಿ ಪರಮೇಶ್ವರ
ಡಾ. ಜಿ ಪರಮೇಶ್ವರ   

ನವದೆಹಲಿ: ಮುಖ್ಯಮಂತ್ರಿಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ, ಒಂದು ಪೈಸೆಯೂ ಕೇಂದ್ರದಿಂದ ಸಿಕ್ಕಿಲ್ಲ. ಹೀಗಾಗಿ ಪ್ರತಿಭಟನೆ ದಾಖಲಿಸಲು ನಾವು ದೆಹಲಿಗೆ ಬಂದಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ದೆಹಲಿಯಲ್ಲಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ’ನಮ್ಮ ಜಿಎಸ್‌ಟಿ ಪಾಲನ್ನು ಕೊಡಿ ಎಂದು ನಾವು ಕೇಂದ್ರ ಸರ್ಕಾರವನ್ನು ಕೇಳುತ್ತಲೇ ಬಂದಿದ್ದೇವೆ. ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಸುಮಾರು ₹35 ಸಾವಿರ ಕೋಟಿ ನಷ್ಟ ಉಂಟಾಗಿದೆ. ಆದರೆ ನಾವು ₹18 ಸಾವಿರ ಕೋಟಿ ಬರಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೆವು. ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರೂ, ಒಂದು ಪೈಸೆ ಕೂಡ ಬಿಡುಗಡೆಗೊಳಿಸಿಲ್ಲ’ ಎಂದು ಹೇಳಿದರು.

‘ಕೆಲವು ಯೋಜನೆಗಳಿಗೆ ಕೆಲವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಅದೂ ಬಂದಿಲ್ಲ. ಚುನಾಯಿತ ಸರ್ಕಾರವಾಗಿ ನಾವು ರಾಜ್ಯದ ಜನತೆಗೆ ಉತ್ತದಾಯಿಗಳು. ಹೀಗಾಗಿ ನಮ್ಮ ಪ್ರತಿಭಟನೆ ದಾಖಲಿಸಲು ದೆಹಲಿಗೆ ಬಂದಿದ್ದೇವೆ’ ಎಂದು ಹೇಳಿದರು.

ADVERTISEMENT

ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರಿಗೂ ನಾವು ಆಹ್ವಾನ ನೀಡಿದ್ದೇವೆ. ಇದು ರಾಜಕೀಯ ಹೋರಾಟ ಅಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.