ADVERTISEMENT

ಸಮಾಜ ಹಾಳು ಮಾಡುತ್ತಿರುವ RSS ಮೇಲೂ ಕ್ರಮ ತೆಗೆದುಕೊಳ್ಳಬೇಕು– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 7:49 IST
Last Updated 28 ಸೆಪ್ಟೆಂಬರ್ 2022, 7:49 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಯಾವುದೇ ಸಂಘಟನೆಯಾದರೂ ನಿಷೇಧಿಸಬೇಕು. ಆರೆಸ್ಸೆಸ್‌ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಯಾರು ಸಮಾಜದಲ್ಲಿ ಕಂಟಕ ಮಾಡುತ್ತಾರೊ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ನಮ್ಮ‌ ಅಭ್ಯಂತರವಿಲ್ಲ. ಶಾಂತಿ ಹಾಳು ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಲಿ. ನಾನು ಆಗಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತಿದ್ದೇನೆ. ದ್ವೇಷದ ರಾಜಕಾರಣ ಮಾಡಿದರೆ ಕ್ರಮ ಜರುಗಿಸಲಿ’ ಎಂದರು.

‘ನುಡಿದಂತೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದೇವೆ’ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ‘ಪಿಎಫ್ಐ ಜೊತೆಗೆ ಒಂದೇ ನಾಣ್ಯದ ಇನ್ನೊಂದು ಮುಖ ಆಗಿರುವ ಆರೆಸ್ಸೆಸ್‌ ವಿರುದ್ಧ ಬಿಜೆಪಿ ಯಾವಾಗ ಕ್ರಮಕೈಗೊಳುತ್ತದೆ? ಎಲ್ಲ ರೀತಿಯ ಕೋಮುವಾದ ಮತ್ತು ದ್ವೇಷ ಸಮಾಜದ ರಚನೆ ಹಾನಿಕಾರಕ. ಅದನ್ನು ನಿಗ್ರಹಿಸುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪಿಎಫ್ಐ ಸಂಘಟನೆಯ ನಿಷೇಧವನ್ನು ಸ್ವಾಗತಿಸಿರುವ ರಾಜ್ಯ ಕಾಂಗ್ರೆಸ್,‘ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ‘ ಎಂದಿದೆ.

‘ಪಿಎಫ್‌ಐ ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ’ ಎಂದೂ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.