ADVERTISEMENT

ಶಿಕ್ಷಣ ಇಲಾಖೆ ಭ್ರಷ್ಟಾಚಾರ ಆರೋಪ:ತಾಳಿಕಟ್ಟೆ ಶಾಲೆಗೆ ನೋಟಿಸ್‌

ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ಸೇಡಿನ ಕ್ರಮ– ಲೋಕೇಶ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 19:31 IST
Last Updated 30 ಆಗಸ್ಟ್ 2022, 19:31 IST

ಬೆಂಗಳೂರು: ‘ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ನೋಂದಾಯಿತ ಅನುದಾನದರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಆರೋಪಿಸಿದ ಬೆನ್ನಲ್ಲೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಅವರ ಒಡೆತನದಲ್ಲಿರುವ ಎರಡು ಶಾಲೆಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ತೆರಳಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪರಿಶೀಲನಾ ವರದಿ ಆಧರಿಸಿ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ನೋಟಿಸ್‌ ನೀಡಿದ್ದಾರೆ.

ಇಲಾಖೆ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಲೋಕೇಶ್‌ ತಾಳಿಕಟ್ಟೆ, ‘ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ದಾಖಲೆಗಳ ಪರಿಶೀಲನೆ ನೆಪದಲ್ಲಿ ದಾಳಿ ನಡೆದಿದೆ. ಸಂಘಟನೆಯ ಇತರ ಕೆಲವು ಪದಾಧಿಕಾರಿಗಳ ಶಾಲೆಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್‌ ನೀಡಿದ್ದಾರೆ’ ಎಂದಿದ್ದಾರೆ.

ಚಿತ್ರದುರ್ಗದ ಹೊಳಲ್ಕೆರೆಯ ತಾಳಿಕಟ್ಟೆಯಲ್ಲಿರುವ ಶ್ರೀರಾಮಪ್ಪ ಮೆಮೋರಿಯಲ್‌ ಎಜುಕೇಷನ್‌ ಟ್ರಸ್ಟ್‌ನ ಸಂದೀಪನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ಗೆ ತೆರಳಿ ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ನೋಂದಣಿ ಪ್ರಮಾಣಪತ್ರ ಸಲ್ಲಿಸಿಲ್ಲ, ಪೂರ್ವ ಪ್ರಾಥಮಿಕ ಶಾಲೆ ಹಾಗೂ 6 ಮತ್ತು 8ನೇ ತರಗತಿ ನಡೆಸಲು ಪಡೆದ ಅನುಮತಿ, 2020–21, 2021–22ನೇ ಸಾಲಿನ ಲೆಕ್ಕ ಪತ್ರ ಸಲ್ಲಿಸಿಲ್ಲ, ಸ್ಥಿರನಿಧಿ ಠೇವಣಿಯ ದಾಖಲೆ ಒದಗಿಸಿಲ್ಲ ಎಂಬುದೂ ಸೇರಿದಂತೆ 10 ವಿಷಯಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ವರದಿ ನೀಡಿದ್ದಾರೆ.

ADVERTISEMENT

ಹೊಳಲ್ಕೆರೆಯ ಓಂ ಈಶ್ವರಿ ವಿದ್ಯಾಸಂಸ್ಥೆಯ ಅಡಿಯಲ್ಲಿ ತಾಲ್ಲೂಕಿನ ಕುಡಿನೀರ ಕಟ್ಟೆಯಲ್ಲಿರುವ ಸಂದೀಪನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ಗೆ ತೆರಳಿ ಪರಿಶೀಲನೆ ನಡೆಸಿದ ಸಮಗ್ರ ಶಿಕ್ಷಣ ಕರ್ನಾಟಕದ ಚಿತ್ರದುರ್ಗ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ, ಶಾಲೆಯ ಆಡಳಿತ ಮಂಡಳಿಯ ನೋಂದಣಿ ಪ್ರಮಾಣಪತ್ರ ಸಲ್ಲಿಸಿಲ್ಲ, ರಾಜ್ಯ ಪಠ್ಯಕ್ರಮದಲ್ಲಿ 1ರಿಂದ 5, 6ರಿಂದ 8ನೇ ತರಗತಿವರೆಗೆ ನಡೆಸಲು ನೀಡಿರುವ ಅನುಮತಿ, ಮಾನ್ಯತೆ ನವೀಕರಣ ಪ್ರತಿ ಒದಗಿಸಿಲ್ಲ. ಶುಲ್ಕ ವಸೂಲಿ ಕುರಿತು ರಸೀದಿ ಪುಸ್ತಕ ಲಭ್ಯ ಇಲ್ಲ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ವರದಿ ನೀಡಿದ್ದಾರೆ. ‌

‘ಪರಿಶೀಲನೆ ಸಂದರ್ಭದಲ್ಲಿ ಒದಗಿಸದ ದಾಖಲೆಗಳನ್ನು ಮೂರು ದಿನಗಳ ಒಳಗೆ ಸಲ್ಲಿಸದಿದ್ದರೆ ಕರ್ನಾಟಕ ಶಿಕ್ಷಣ ಕಾಯ್ದೆ ಅನ್ವಯ ಕ್ರಮತೆಗೆದುಕೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಎರಡೂ ಶಾಲೆಗಳ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆಯ ಚಿತ್ರದುರ್ಗ ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ನೋಟಿಸ್‌ ನೀಡಿದ್ದಾರೆ.

‘ಆಯುಕ್ತರಿಗೆ ನಾಳೆ ದಾಖಲೆ ಸಲ್ಲಿಕೆ’
‘ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಕುರಿತು ಇದೇ 26ರಂದು ಪ್ರಧಾನಿಗೆ ಪತ್ರ ಬರೆದಿದ್ದೆವು. ಈ ವಿಚಾರದ ಕುರಿತು ಇಲಾಖೆಯ ಆಯುಕ್ತರು ದಾಖಲೆಗಳೊಂದಿಗೆ ಸೆ. 1ರಂದು ಮಧ್ಯಾಹ್ನ 3 ಗಂಟೆಗೆ ಹಾಜರಾಗಲು ತಿಳಿಸಿದ್ದಾರೆ. ಅವರ ಸೂಚನೆಯಂತೆ, ದಾಖಲೆಗಳ ಸಹಿತ ಸಂಘದ ಆಯ್ದ ಪದಾಧಿಕಾರಿಗಳ ಜೊತೆ ಆಯುಕ್ತರನ್ನು ಭೇಟಿ ಮಾಡುತ್ತೇವೆ. ನಂತರ ಮಾಧ್ಯಮಗಳಿಗೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದು ಲೋಕೇಶ್‌ ತಾಳಿಕಟ್ಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.