ADVERTISEMENT

ಯುವತಿಯರ ಬಗ್ಗೆ ಕೀಳು ಹೇಳಿಕೆ, ಪ್ರಿಯಾಂಕ್ ಖರ್ಗೆಗೆ ನೋಟಿಸ್‌: ಪ್ರಮೀಳಾ ನಾಯ್ಡು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:42 IST
Last Updated 16 ಆಗಸ್ಟ್ 2022, 21:42 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಒಬ್ಬ ಜನಪ್ರತಿನಿಧಿ ಸರ್ಕಾರಿ ಕೆಲಸ ಮಾಡುತ್ತಿರುವ ಯುವತಿಯರ ಬಗ್ಗೆ ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್‌ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದರು.

‘ಯುವತಿಯರು ಸರ್ಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರಮೀಳಾ ನಾಯ್ಡು, ‘ಪ್ರಿಯಾಂಕ್ ಅವರು ಹತ್ತು ದಿನಗಳಲ್ಲಿ ಉತ್ತರ ನೀಡುವುದರ ಜೊತೆಗೆ ಅವರು ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು’ ಎಂದರು.

ADVERTISEMENT

‘ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ್ದ ‍ಪ್ರಿಯಾಂಕ್‌, ಮಹಿಳೆಯರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಲಂಚ–ಮಂಚದ ಸರ್ಕಾರ, ಸರ್ಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕು. ಯುವತಿಯರು ಮಂಚ ಹತ್ತಬೇಕು ಎಂದಿದ್ದರು. ಇದು ಉದ್ಯೋಗಸ್ಥ, ಉದ್ಯೋಗಾಕಾಂಕ್ಷಿ ಮಹಿಳೆಯರಿಗೆ ಮಾಡಿರುವ ಅವಮಾನ. ಆದ್ದರಿಂದ ಮಹಿಳಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಎಎಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಆಗ್ರಹಿಸಿದರು.

ಎಎಪಿ ಮಾಧ್ಯಮ ವಕ್ತಾರೆ ಉಷಾ ಮೋಹನ್ ಇದ್ದರು.

‘ಮಹಿಳೆಯರಿಗೆ ಗೌರವ ನೀಡಬೇಕು’
‘75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯರಿಗೆ ಎಲ್ಲರೂ ಗೌರವ ನೀಡಬೇಕು. ಕರ್ನಾಟಕ ರಾಜ್ಯ ಮಹಿಳಾ ಆಯೋಗ ರಾಜ್ಯದಲ್ಲಿ ಪ್ರವಾಸ ಮಾಡಿ ಪ್ರತಿ ಹೆಣ್ಣು ವಿದ್ಯಾವಂತರಾಗಿ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಮಹಿಳೆಯರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು’ ಎಂದು ಪ್ರಮೀಳಾ ನಾಯ್ಡು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.