ADVERTISEMENT

ಕಾರ್ಯಕರ್ತರು ಒಪ್ಪಿದರಷ್ಟೇ ಅನರ್ಹ ಶಾಸಕರ ಸೇರ್ಪಡೆ: ಎನ್‌.ರವಿಕುಮಾರ್‌

5 ಲಕ್ಷ ಅಲ್ಪಸಂಖ್ಯಾತರ ನೋಂದಣಿಗೆ ಬಿಜೆಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:48 IST
Last Updated 2 ಆಗಸ್ಟ್ 2019, 19:48 IST
ರವಿಕುಮಾರ್
ರವಿಕುಮಾರ್   

ಬೆಂಗಳೂರು: ಪಕ್ಷದ ಕಾರ್ಯಕರ್ತರು ಒಪ್ಪಿದರೆ ಮಾತ್ರ ಅನರ್ಹಗೊಂಡಿರುವ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಬಂಡಾಯ ಎದ್ದು ಹೊರಬಂದು ಅನರ್ಹಗೊಂಡಿರುವ 17 ಶಾಸಕರು ಎಲ್ಲೂ ತಾವು ಬಿಜೆಪಿ ಸೇರುತ್ತೇವೆ ಎಂದು ಹೇಳಿಕೊಂಡಿಲ್ಲ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಇವರೆಲ್ಲ ಪಕ್ಷದ ತತ್ವ ಮತ್ತು ಸಿದ್ಧಾಂತ ಒಪ್ಪಿ ಬರುವುದಾದರೆ ಬರಲಿ. ಆದರೆ, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯಲಾಗುವುದು. ಆತುರಕ್ಕೆ ಬಿದ್ದು ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದರು.

ADVERTISEMENT

5 ಲಕ್ಷ ಅಲ್ಪಸಂಖ್ಯಾತ ನೋಂದಣಿ ಗುರಿ

ಸದಸ್ಯತ್ವ ಅಭಿಯಾನದಲ್ಲಿ ಅಲ್ಪಸಂಖ್ಯಾತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯತ್ತ ಸೆಳೆಯಲು ವಿಶೇಷ ಪ್ರಯತ್ನ ನಡೆಸಿದ್ದು, 5 ಲಕ್ಷ ಅಲ್ಪಸಂಖ್ಯಾತರನ್ನು ನೋಂದಾಯಿಸುವ ಗುರಿ ಇದೆ ಎಂದು ರವಿಕುಮಾರ್‌ ತಿಳಿಸಿದರು.

ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ಇದೇ 3, 4 ಮತ್ತು ಆಗಸ್ಟ್‌10ಮತ್ತು 11 ರಂದು ದಿನವಿಡೀ ಸದಸ್ಯತ್ವ ನೋಂದಣಿ ನಡೆಯಲಿದೆ ಎಂದರು.

ಅಧ್ಯಕ್ಷ ಹುದ್ದೆಗೆ ಹೆಚ್ಚಿದ ಆಕಾಂಕ್ಷಿಗಳು

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಸುನಿಲ್‌ ಕುಮಾರ್, ನಳಿನ್ ಕುಮಾರ್‌ ಕಟೀಲ್‌, ಶೋಭಾಕರಂದ್ಲಾಜೆ ಅವರ ಹೆಸರು ಕೇಳಿ ಬಂದಿದೆ.

ಪಕ್ಷದ ವರಿಷ್ಠರು ಯುವ ಪೀಳಿಗೆಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಉದ್ದೇಶಿಸಿರುವುದರಿಂದ ಹಲವರು ಈ ಬಗ್ಗೆ ಆಸಕ್ತಿ ತಳೆದಿದ್ದಾರೆ. ಇವರಲ್ಲಿ ಕೆಲವರು ಅಧ್ಯಕ್ಷರಾಗಿ ಕಾರ್ಯ ನಿವರ್ಹಿಸಲು ಉತ್ಸಾಹವಿರುವುದಾಗಿ ರಾಜ್ಯದ ವರಿಷ್ಠರಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ ಭಾಗಕ್ಕೆ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದೂ ಒತ್ತಾಯ ಕೇಳಿ ಬಂದಿದೆ. ಇವೆಲ್ಲ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿ ಇಲ್ಲದ ಅಚ್ಚರಿಯ ಹೆಸರೂ ಆಯ್ಕೆ ಆಗಲೂಬಹುದು ಎಂದು ಮೂಲಗಳು ಹೇಳಿವೆ.

ಸಂಪುಟ ವಿಸ್ತರಣೆ: 8ರ ಬಳಿಕ

ಬಿ.ಎಸ್‌.ಯಡಿಯೂರಪ್ಪ ಇದೇ 5 ರ ಸಂಜೆ ದೆಹಲಿಗೆ ತೆರಳಲಿದ್ದು,
ಮೂರು ದಿನಗಳ ಕಾಲ ಅಲ್ಲೇ ಇದ್ದು, ಸಂಪುಟ ರಚನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಧಾನಿ ಸೇರಿ ಕೇಂದ್ರ ಸಚಿವರೊಂದಿಗೆ ಚರ್ಚಿಸಲಿದ್ದಾರೆ. ಆ ಬಳಿಕ ಸಚಿವ ಸಂಪುಟ ರಚಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.