ADVERTISEMENT

ನರೇಗಾ ಬಚಾವೊ ಆಂದೋಲನ ಜನಾಂದೋಲನ ಆಗಬೇಕು; ಮುಖ್ಯಮಂತ್ರಿ ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 10:19 IST
Last Updated 13 ಜನವರಿ 2026, 10:19 IST
<div class="paragraphs"><p>ಮುಖ್ಯಮಂತ್ರಿ ಸಿದ್ಧರಾಮಯ್ಯ</p></div>

ಮುಖ್ಯಮಂತ್ರಿ ಸಿದ್ಧರಾಮಯ್ಯ

   

ಬೆಂಗಳೂರು: ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಕಾಯ್ದೆ ಮರು ಜಾರಿ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ ರಾಜ್ಯ ಕಾಂಗ್ರೆಸ್, ‘ನರೇಗಾ ಬಚಾವೊ ಅಭಿಯಾನ'ವನ್ನು ಜನಾಂದೋಲನವಾಗಿ ಪರಿವರ್ತಿಸುವುದಾಗಿ ಘೋಷಿಸಿದೆ.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಂಗಳವಾರ ನಡೆದ ‘ನರೇಗಾ ಬಚಾವೊ ಸಂಗ್ರಾಮ’ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ‘ನರೇಗಾ ಕಾಯ್ದೆಯ ಬದಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ರದ್ದು ಆಗಲೇಬೇಕು. ನರೇಗಾ ಕಾಯ್ದೆ ಮರು ಜಾರಿ ಆಗುವವರೆಗೆ ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಹೋರಾಟ ಮುಂದುವರಿಸಬೇಕು’ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ADVERTISEMENT

‘ನರೇಗಾ ಬಚಾವೊ ಅಭಿಯಾನವನ್ನು ಆಂದೋಲನವಾಗಿ ಮಾಡಬೇಕಿದೆ. ಈ ಆಂದೋಲನ ನರೇಗಾ ಕಾಯ್ದೆ ಮತ್ತೆ ಜಾರಿಗೆ ಬರುವವರೆಗೆ ಮುಂದುವರಿಯಬೇಕು. ಉತ್ತರ ಭಾರತದಲ್ಲಿ ರೈತರು ಕಾಯ್ದೆ ಬದಲಾವಣೆಗೆ ಹೋರಾಟ ಮಾಡಿದ ರೀತಿಯಲ್ಲಿಯೇ ನಾವೂ ಹೋರಾಟ ಮಾಡಬೇಕು’ ಎಂದರು.

‘ನರೇಗಾ ಕಾಯ್ದೆಯ ಬದಲು ಹೊಸ ಕಾಯ್ದೆ ಜಾರಿಗೆ ಬಂದರೆ, ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ಸೂಚಿಸಿದ ಸ್ಥಳದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಳೆ ಕಾಯ್ದೆಯ ಪ್ರಕಾರ ನಾವು ಶೇ 10ರಷ್ಟು ಹಣ ಮಾತ್ರ ಕೊಡುತ್ತಿದ್ದೆವು. ಹೊಸ ಕಾಯ್ದೆಯಲ್ಲಿ ಶೇ 40ರಷ್ಟು ರಾಜ್ಯ ಕೊಡಬೇಕು. ಶೇ 60ರಷ್ಟು ಕೇಂದ್ರ ಸರ್ಕಾರ ಕೊಡುತ್ತದೆ. ಇದರಿಂದ ರಾಜ್ಯಕ್ಕೆ ಸುಮಾರು ₹ 2,500 ಕೋಟಿ ಹೊರೆ ಬೀಳಲಿದೆ’ ಎಂದರು.


‘ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯು ನರೇಗಾ ಕಾಯ್ದೆ ರದ್ದು ಮಾಡಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ’ ಎಂದರು.

‘ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ನರೇಗಾ ಕಾಯ್ದೆಯನ್ನು ಗ್ರಾಮೀಣ ಪ್ರದೇಶದ ಬಡವರಿಗೆ ಕೆಲಸದ ಹಕ್ಕು ನೀಡಲೆಂದು ಮೂಲಭೂತ ಹಕ್ಕನ್ನಾಗಿ ಮಾಡಿದ್ದರು. 20 ವರ್ಷಗಳಿಂದ ಜಾರಿಯಲ್ಲಿದ್ದ ಕಾಯ್ದೆಯಡಿ 12.16 ಕೋಟಿ ಕಾರ್ಮಿಕರು ದೇಶದಾದ್ಯಂತ ಕೆಲಸ ಮಾಡುತ್ತಿದ್ದು, 6.21ಕೋಟಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ’ ಎಂದರು.

ಮತ್ತೊಮ್ಮೆ ಗಾಂಧೀಜಿ ಕೊಲೆ: ‘ನರೇಗಾ ಕಾಯ್ದೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 365 ದಿನಗಳ ಕಾಲ ಕೆಲಸ ಕೇಳಬಹುದಾಗಿತ್ತು. ಕಾರ್ಮಿಕರು ಅವರ ಊರಿನಲ್ಲಿ, ಅವರ ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಅದನ್ನು ಬದಲಾಯಿಸಿ ಮೋದಿ ಸರ್ಕಾರ ‘ವಿಬಿ ಜಿ ರಾಮ್ ಜಿ’ ಕಾಯ್ದೆ ಜಾರಿಗೆ ತಂದಿದೆ. ಕಾಯ್ದೆಯ ಹೆಸರಿನಲ್ಲಿರುವ ‘ರಾಮ್’ ದಶರಥ ರಾಮ, ಸೀತಾ ರಾಮ ಅಥವಾ ಕೌಶಲ್ಯ ರಾಮನಲ್ಲ. ಮಹಾತ್ಮಾ ಗಾಂಧಿ ಕೊಂದ ನಾಥೂರಾಮ. ಗಾಂಧಿಯವರನ್ನು ಮೊತ್ತೊಮ್ಮೆ ಕೊಲ್ಲುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.


ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ ಮಾತನಾಡಿದರು. 

ಕಾಂಗ್ರೆಸ್‌ನಿಂದ ಹೋರಾಟ: ನರೇಗಾ ಕಾಯ್ದೆ ಮರು ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ರೂಪಿಸಲು ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ, ಚಂದ್ರಶೇಖರ್, ಜಿಲ್ಲಾಮಟ್ಟದಲ್ಲಿ ಉಸ್ತುವಾರಿ ಸಚಿವರು, ಶಾಸಕರನ್ನು ಸೇರಿಸಿ ಜಿಲ್ಲಾ ಘಟಕಗಳ ಅಧ್ಯಕ್ಷರು ಸುದ್ದಿಗೋಷ್ಠಿಗಳನ್ನು ನಡೆಸಬೇಕು. ಈ ಹೋರಾಟಕ್ಕೆ ಕೈಜೋಡಿಸದ ಉಸ್ತುವಾರಿ ಸಚಿವರು, ಶಾಸಕರ ಕುರಿತು ಕೆಪಿಸಿಸಿಗೆ ವರದಿ ನೀಡಬೇಕು. ಅದನ್ನು ಹೈಕಮಾಂಡ್‌ಗೆ ಕಳುಹಿಸಲಾಗುವುದು’ ಎಂದರು. 

‘ನರೇಗಾ ಮರು ಸ್ಥಾಪಿಸುವಂತೆ ಆಗ್ರಹಿಸಿ ಜಿಲ್ಲಾಮಟ್ಟದಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಮಾಡಬೇಕು. ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ಮಾಡಬೇಕು. ಜ. 30ರಂದು ವಾರ್ಡ್‌ ಮಟ್ಟದಲ್ಲಿ ಶಾಂತಿಯುತ ಧರಣಿ ಮಾಡಬೇಕು. ಫೆ. 6ರಂದು ನರೇಗಾ ಬಚಾವ್‌ ಧರಣಿ ಹಮ್ಮಿಕೊಳ್ಳಬೇಕು. ಬಳಿಕ ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದರು. 

ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಎಂ.ಸಿ. ಸುಧಾಕರ್, ಕೆ.ಎಚ್. ಮುನಿಯಪ್ಪ, ಉಸ್ತುವಾರಿ ಕಾರ್ಯದರ್ಶಿಗಳು, ಕೆಪಿಸಿಸಿ ಪದಾಧಿಕಾರಿಗಳು, ಹಾಲಿ, ಮಾಜಿ ಸಂಸದರು, ಶಾಸಕರು, ಪರಿಷತ್‌ ಸದಸ್ಯರು, ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಿಗಮ ಮಂಡಳಿ ಅಧ್ಯಕ್ಷರು- ಉಪಾಧ್ಯಕ್ಷರು, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷರು, ಕೆಪಿಸಿಸಿ ಮುಂಚೂಣಿ ಘಟಕಗಳ, ವಿಭಾಗಗಳ ಅಧ್ಯಕ್ಷರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.