ADVERTISEMENT

ನರೇಗಾ ಯೋಜನೆ ಕುರಿತು ಚರ್ಚೆ: ಕಾಂಗ್ರೆಸ್‌ ಪಂಥಾಹ್ವಾನ ಸ್ವೀಕರಿಸಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 16:25 IST
Last Updated 10 ಜನವರಿ 2026, 16:25 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

ಬೆಂಗಳೂರು: ‘ನರೇಗಾ ಯೋಜನೆಯ ಹೊಸ ಸ್ವರೂಪ ಕುರಿತು ಬಹಿರಂಗ ಚರ್ಚೆಗೆ ಕಾಂಗ್ರೆಸ್‌ ನಾಯಕರು ನೀಡಿರುವ ಆಹ್ವಾನ ಸ್ವೀಕರಿಸಿದ್ದೇನೆ. ನರೇಗಾ ಯೋಜನೆಯಲ್ಲಿ ರಾಜ್ಯ ಸರ್ಕಾರ ನಡೆಸಿದ ಭ್ರಷ್ಟಾಚಾರವನ್ನೂ ಅದೇ ವೇದಿಕೆಯಲ್ಲಿ ಬಹಿರಂಗಪಡಿಸುತ್ತೇನೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ನರೇಗಾ ಯೋಜನೆಯ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸವಾಲು ಹಾಕಿದ್ದರು.

ADVERTISEMENT

ಬಿಜೆಪಿ ನಾಯಕರ ಜತೆ ಶನಿವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ‘ವಿಬಿ–ಜಿ ರಾಮ್‌ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್‌ ಪಕ್ಷ ಸುಳ್ಳಿನ ಕಥನ ಸೃಷ್ಟಿ ಮಾಡುತ್ತಿದೆ. ಆ ಸುಳ್ಳನ್ನು ಎದುರಿಸಲು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇನೆ. ಅವರು ಹರಡುತ್ತಿರುವ ಸುಳ್ಳುಗಳನ್ನು ಜನರು ನಂಬುವ ಕಾಲ ಈಗ ಇಲ್ಲ’ ಎಂದರು.

‘ಸುದೀರ್ಘ ಅವಧಿ ದೇಶವನ್ನು ಆಳಿದ ಕಾಂಗ್ರೆಸ್‌ ನಾಯಕರು ಯಾವುದಾದರೂ ಪ್ರಮುಖ ಯೋಜನೆಗಳಿಗೆ ಗಾಂಧೀಜಿ ಅವರ ಹೆಸರು ಇಟ್ಟಿದ್ದಾರೆಯೇ? ಎಲ್ಲಾ ಯೋಜನೆಗಳಿಗೆ ನೆಹರೂ ಕುಟುಂಬದ ಸದಸ್ಯರ ಹೆಸರು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಕೇವಲ ಮತಕ್ಕಾಗಿ ಹೆಸರು ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ’ ಎಂದು ಹೇಳಿದರು.

‘ನರೇಗಾದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಜಾಬ್‌ಕಾರ್ಡ್‌ ಇಲ್ಲದವರಿಗೂ ಹಣ ನೀಡಿದ್ದಾರೆ. ಗ್ರಾಮೀಣ ಜನರಿಗೆ ಅಗತ್ಯವಾದ ಆಸ್ತಿಯನ್ನು ಸೃಷ್ಟಿಸಿಲ್ಲ. ಕೇಂದ್ರದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದ್ದಾರೆ. ಕಳ್ಳ ಲೆಕ್ಕ ಸೃಷ್ಟಿಸಿ ಲೂಟಿ ಮಾಡಿದ್ದಾರೆ. ಈ ತಪ್ಪುಗಳನ್ನು ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ಸರಿ ಮಾಡಲಿಲ್ಲ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಲೋಪಗಳನ್ನು ಸರಿಪಡಿಸಲು ಕಾಯ್ದೆಗೆ ತಿದ್ದುಪಡಿ ತಂದಿದೆ’ ಎಂದರು.  

‘ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಪ್ಪಳದಲ್ಲಿ ನರೇಗಾ ಕೂಲಿ ಕೊಟ್ಟಿಲ್ಲ ಎಂದು ಪ್ರತಿಭಟನೆ ನಡೆಸಿದವರ ಮೇಲೆ ಲಾಠಿ ಚಾರ್ಜ್ ನಡೆದಿತ್ತು. ಕೂಲಿ ನೀಡುವುದಾಗಿ ಟ್ರ್ಯಾಕ್ಟರ್‌ನಲ್ಲಿ ಕರೆದುಕೊಂಡು ಹೋಗಿದ್ದ ಕಾರ್ಮಿಕರಿಗೆ ಜಾಬ್‌ಕಾರ್ಡ್‌ ಇರಲಿಲ್ಲ. ಅಪಘಾತಕ್ಕೆ ತುತ್ತಾಗಿ ಕೆಲ ಕಾರ್ಮಿಕರು ಮೃತಪಟ್ಟಿದ್ದರು. ಕಾಂಗ್ರೆಸ್‌ ಭ್ರಷ್ಟಾಚಾರಕ್ಕೆ ಇದು ಸಾಕ್ಷಿ’ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ವಿಧಾನಪರಿಷ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಯುವ ಜನತಾದಳ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.