ADVERTISEMENT

ಎನ್‌ಎಸ್‌ಡಿ: ಕನ್ನಡಿಗರ ಸೀಟು ಅನ್ಯರ ಪಾಲು

ಎನ್‌ಎಸ್‌ಡಿ: ಅಭಿನಯ ಕೋರ್ಸ್‌ಗೆ ರಾಜ್ಯದ ಅಭ್ಯರ್ಥಿಗಳ ನಿರಾಸಕ್ತಿ

ವರುಣ ಹೆಗಡೆ
Published 28 ಜುಲೈ 2020, 21:16 IST
Last Updated 28 ಜುಲೈ 2020, 21:16 IST
ಸಿ.ಬಸವಲಿಂಗಯ್ಯ
ಸಿ.ಬಸವಲಿಂಗಯ್ಯ   

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು (ಎನ್‌ಎಸ್‌ಡಿ) ಒಂದು ವರ್ಷದ ಅಭಿನಯ ಕೋರ್ಸ್‌ಗೆ ಕನ್ನಡಿಗರಿಗೆ ಅರ್ಧದಷ್ಟು ಸೀಟುಗಳನ್ನು ಮೀಸಲಿರಿಸಿದೆ. ಆದರೆ, ರಾಜ್ಯದ ಪದವೀಧರರು ಆಸಕ್ತಿ ತೋರಿಸದೇ ಇದ್ದುದರಿಂದ ಆ ಸೀಟುಗಳು ಕೂಡ ಅನ್ಯ ರಾಜ್ಯದವರ ಪಾಲಾಗುತ್ತಿವೆ.

ದಕ್ಷಿಣ ಭಾರತದ ರಾಜ್ಯಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿರುವಬೆಂಗಳೂರು ಕೇಂದ್ರವು ಅಭಿನಯಕ್ಕೆ ಸಂಬಂಧಿಸಿದ ಒಂದು ವರ್ಷದ ಕೋರ್ಸ್ನಡೆಸುತ್ತಿದೆ. ಸಂಗೀತ, ನೃತ್ಯ, ಸಾಹಸಕಲೆ, ಅಭಿನಯ ಸೇರಿದಂತೆ ವಿವಿಧ ಕೌಶಲ
ಗಳನ್ನು ಒಂದು ವರ್ಷದ ಅವಧಿಯಲ್ಲಿ ಕಲಿಸಲಾಗುತ್ತದೆ. ಈ ಕೋರ್ಸ್ ಪ್ರವೇಶಕ್ಕೆ ಉತ್ತರ ಭಾರತದ ಅಭ್ಯರ್ಥಿಗಳೂ ಪೈಪೋಟಿ ನೀಡುತ್ತಿದ್ದಾರೆ.

ಪ್ರತಿ ವರ್ಷ 20 ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಪ್ರಾದೇಶಿಕ ಕೇಂದ್ರಕ್ಕೆ ಸ್ಥಳ ಹಾಗೂ ಸಹಕಾರವನ್ನು ಇಲ್ಲಿನ ಸರ್ಕಾರ ಕೊಟ್ಟಿರುವುದರಿಂದಾಗಿ ಹತ್ತು ಸೀಟುಗಳನ್ನು ಕನ್ನಡಿಗರಿಗೆ ಮೀಸಲಿಡಲಾಗಿದೆ. ಇಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಬೇರೆ ರಾಜ್ಯಗಳ ಅಭ್ಯರ್ಥಿಗೆ ಆ ಸೀಟುಗಳು ಹಂಚಿಕೆಯಾಗಲಿವೆ. ಕಳೆದ ವರ್ಷ ಪ್ರವೇಶಾತಿ ಪಡೆದವರಲ್ಲಿ 8 ಮಂದಿ ಮಾತ್ರ ಕನ್ನಡದ ಮೀಸಲಾತಿಯಡಿ ಸೀಟು ಪಡೆದಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಮಾತ್ರ ಇಲ್ಲಿನ ನಿವಾಸಿಗಳು. ಉಳಿದವರು ಇಲ್ಲಿಗೆ ಬಂದು ಕನ್ನಡವನ್ನು ಕಲಿತವರಾಗಿದ್ದಾರೆ. ಇನ್ನುಳಿದ 12 ಸೀಟುಗಳು ತಮಿಳುನಾಡು ಸೇರಿ ದಕ್ಷಿಣ ಭಾರತದ ಇತರೆ ರಾಜ್ಯಗಳ ಅಭ್ಯರ್ಥಿಗಳ ಪಾಲಾಗಿದ್ದವು. ಈ ವರ್ಷವೂ ಪ್ರವೇಶಾತಿಗೆ ಕನ್ನಡೇತರ ಅಭ್ಯರ್ಥಿಗಳಿಂದಲೇ ಹೆಚ್ಚಿನ ಅರ್ಜಿಗಳು ಬಂದಿವೆ. ‌

ADVERTISEMENT

ಮಹಿಳಾ ಅಭ್ಯರ್ಥಿಗಳಿಲ್ಲ:2020–21ನೇ ಸಾಲಿನ ಅಭಿನಯ ತರಬೇತಿಗೆ ಸದ್ಯ 70 ಅರ್ಜಿಗಳು ಬಂದಿವೆ. ಅದರಲ್ಲಿ 10 ಮಂದಿ ಮಾತ್ರ ಕನ್ನಡಿಗರಾಗಿದ್ದಾರೆ. ಒಬ್ಬ ಮಹಿಳಾ ಅಭ್ಯರ್ಥಿಯೂ ಅರ್ಜಿ ಸಲ್ಲಿಸಿಲ್ಲ. ಕಳೆದ ವರ್ಷ ಕನ್ನಡದ ಮೀಸಲಾತಿಯಡಿ ಪ್ರವೇಶ ಪಡೆದವರಲ್ಲಿ ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿ ಇರಲಿಲ್ಲ. ಮಹಿಳಾ ಅಭ್ಯರ್ಥಿಗಳುಪ್ರವೇಶಾತಿಗೆ ಆಸಕ್ತಿ ತೋರದೇ ಇದ್ದುದರಿಂದ ನಾಟಕದಲ್ಲಿ ಬರುವ ಸ್ತ್ರೀ ಪಾತ್ರವನ್ನು ಕೂಡ ಪುರುಷರೇ ನಿಭಾಯಿಸಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ.

‘ಇಲ್ಲಿನ ಅಭ್ಯರ್ಥಿಗಳು ಕೇಂದ್ರವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬಆಶಯ ನಮ್ಮದು. ಹಾಗಾಗಿ ರಾಜ್ಯದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನವರು ಅರ್ಜಿ ಸಲ್ಲಿಸಿದಲ್ಲಿ ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯ. ಉತ್ತರ ಭಾರತದ ರಾಜ್ಯಗಳಿಂದಲೂ ಅರ್ಜಿಗಳು ಬಂದಿವೆ. ವಿವಿಧ ಅಭಿನಯ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದರಿಂದಾಗಿ ಇಲ್ಲಿನವರು ಕಡಿಮೆ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರಬಹುದು’ಎಂದು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ತಿಳಿಸಿದರು.

ಮಾಸಿಕ ಶಿಷ್ಯವೇತನ ₹ 4,500ದಿಂದ ₹6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಲ್ಲಿನ ರಂಗ ಶಿಕ್ಷಣಕ್ಕೆ ವಿಶೇಷ ಮಹತ್ವವಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಲಾಭ ಪಡೆದುಕೊಳ್ಳಬೇಕು
-ಸಿ. ಬಸವಲಿಂಗಯ್ಯ,ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.