ADVERTISEMENT

ಸಂವಿಧಾನದ ಮರುವ್ಯಾಖ್ಯಾನಕ್ಕೆ ನ್ಯಾಯಮೂರ್ತಿ ವಿ. ಗೋಪಾಲಗೌಡ ಆಕ್ಷೇಪ

ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 20:15 IST
Last Updated 26 ಜನವರಿ 2023, 20:15 IST
ನಗರದಲ್ಲಿ ಗುರುವಾರ ಸೌಹಾರ್ದ ಭಾರತ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ನಿವೃತ್ತ ನ್ಯಾ.ವಿ.ಗೋಪಾಲ ಗೌಡ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್‌, ಸೌಹಾರ್ದ ಭಾರತದ ಸಂಚಾಲಕ ಎಸ್.ಆರ್. ಮೆಹ್ರುಜ್ ಖಾನ್ ಇದ್ದಾರೆ. –ಪ್ರಜಾವಾಣಿ ಚಿತ್ರ.
ನಗರದಲ್ಲಿ ಗುರುವಾರ ಸೌಹಾರ್ದ ಭಾರತ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ನಿವೃತ್ತ ನ್ಯಾ.ವಿ.ಗೋಪಾಲ ಗೌಡ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್‌, ಸೌಹಾರ್ದ ಭಾರತದ ಸಂಚಾಲಕ ಎಸ್.ಆರ್. ಮೆಹ್ರುಜ್ ಖಾನ್ ಇದ್ದಾರೆ. –ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ಶ್ರಮ, ತಾಳ್ಮೆ ಹಾಗೂ ದೂರದೃಷ್ಟಿಯಿಂದ ರೂಪಿಸಿದ ಸಂವಿಧಾನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮರು ವ್ಯಾಖ್ಯಾನ ಮಾಡಲಾಗುತ್ತಿದೆ‌’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.

ಸೌಹಾರ್ದ ಭಾರತ ಸಂಸ್ಥೆ, ಹಶಿ ಥಿಯೇಟರ್ ಫೋರಂ ಗುರುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದ ಮಹಾನಾಯಕರು ಸೌಹಾರ್ದ, ಸಮಾನತೆ, ಜಾತ್ಯತೀತ, ಸಾಮಾಜವಾದ, ನ್ಯಾಯ, ಸಮಾ ನತೆ, ಸ್ವಾತಂತ್ರ್ಯ, ‌ಭ್ರಾತೃತ್ವವಿರುವ ಅಭೂತಪೂರ್ವ ಲಿಖಿತ ಸಂವಿಧಾನ ವನ್ನು ದೇಶದ ಜನರಿಗೆ ನೀಡಿ‌ ದ್ದಾರೆ. ಪ್ರಸ್ತಾವನೆಯೇ ಸಂವಿಧಾ
ನದ ಆಶಯವನ್ನು ಬಿಂಬಿಸುತ್ತದೆ. ಅಂತಹ ಸಂವಿಧಾನವನ್ನು ಬದಲಾಯಿಸುವ ಸಾಹಸ ಮಾಡಬಾರದು’ ಎಂದು ಹೇಳಿದರು.

ADVERTISEMENT

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಸಾಮಾಜಿಕ ನ್ಯಾಯ, ಹಕ್ಕಿನ ಕುರಿತು ಸದಾ ಧ್ವನಿ ಎತ್ತುತ್ತಿದ್ದ ದೇಶದಲ್ಲಿ ಸೌಹಾರ್ದ ಕುರಿತು ಮಾತನಾಡಬೇಕಿರುವುದು ವಿಪರ್ಯಾಸ. ಒಟ್ಟಿಗೆ ಬಾಳುವ ನಾವು ನಮ್ಮವರ ಎದುರೇ ನ್ಯಾಯ ಕೇಳುವ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ’ ಎಂದು ಹೇಳಿದರು.

’ಕನ್ನಡ ಸಾಹಿತ್ಯ ಪರಂಪರೆಯಲ್ಲೂ ಸಾಮಾಜಿಕ ನ್ಯಾಯ ಚರ್ಚೆಯ ವಿಷಯವಾಗಿತ್ತು. ಅದನ್ನು ಹಿಮ್ಮೆಟ್ಟಿಸಿ ಸಾಮರಸ್ಯದ ಚರ್ಚೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್. ಶಂಕರ್, ‘ಸಂವಿಧಾನ ರಚನಾ ಸಭೆಯ ಸದಸ್ಯರ ಸ್ಥಿತಿ ಪ್ರಜ್ಞೆಯ ಕಾರಣದಿಂದಾಗಿ ಸುಭದ್ರ ಸಂವಿಧಾನ ರಚಿಸಲು ಸಾಧ್ಯವಾಯಿತು. ವಿಭಜನೆ, ಕೋಮು ಸಂಘರ್ಷ, ಕಲುಷಿತ ವಾತಾವರಣ ಇದ್ದರೂ, ವೈವಿಧ್ಯ ಬಹುತ್ವದ ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ನಿಷ್ಪಕ್ಷಪಾತ ಚುನಾವಣೆ, ಶಾಂತಿಯುತ ಅಧಿಕಾರ ಬದಲಾವಣೆ ಸಾಧ್ಯವಾಗಿರುವುದೇ ಸಂವಿಧಾನದ ಗಟ್ಟಿತನಕ್ಕೆ ಸಾಕ್ಷಿ’ ಎಂದು ಬಣ್ಣಿಸಿದರು.

ನಂತರ ನಡೆದ ಸೌಹಾರ್ದ ಮತ್ತು ಬಹುತ್ವದ ಚರ್ಚೆಯಲ್ಲಿ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್‌, ಸಾಮಾಜಿಕ ಹೋರಾಟಗಾರ್ತಿ ಶಬ್ನಂ ಹಶ್ಮಿ, ಇತಿಹಾಸ ತಜ್ಞೆ ಮೃದುಲಾ ಮುಖರ್ಜಿ, ಪತ್ರಕರ್ತೆ ಸಭಾ ನಖ್ವಿ ಅವರು ಚರ್ಚೆ ನಡೆಸಿದರು. ಕಾಲೇಜು ವಿದ್ಯಾರ್ಥಿಗಳು, ಯುವಜನರು ಬೀದಿನಾಟಕ, ಸಾಂಸ್ಕೃತಿಕ ವೇಷಭೂಷಣ, ನೃತ್ಯಗಳನ್ನು ಪ್ರದರ್ಶಿಸಿದರು. ಭೂಮಿತಾಯಿ ಬಳಗದವರು ಗೀತೆಗಳನ್ನು ಹಾಡಿದರು.

ಸಂಚಾಲಕರಾದ ಮೆಹ್ರುಜ್ ಖಾನ್‌, ಡಾ.ಟಿ.ಎಚ್.ಲವಕುಮಾರ್‌, ವಿಜಯ್ ಸೀತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.