ADVERTISEMENT

ಸ್ಯಾಂಟ್ರೊ ರವಿ ಅಕ್ರಮ ಆಸ್ತಿ ತನಿಖೆಯಾಗಲಿ: ಪ್ರಧಾನಿ ಮೋದಿಗೆ ‘ಒಡನಾಡಿ’ ಮನವಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 1:36 IST
Last Updated 10 ಜನವರಿ 2023, 1:36 IST
ಕೆ.ಎಸ್‌.ಮಂಜುನಾಥ್ ಆಲಿಯಾಸ್ ಸ್ಯಾಂಟ್ರೊ ರವಿ
ಕೆ.ಎಸ್‌.ಮಂಜುನಾಥ್ ಆಲಿಯಾಸ್ ಸ್ಯಾಂಟ್ರೊ ರವಿ   

ಮೈಸೂರು: ‘ಕೆ.ಎಸ್‌.ಮಂಜುನಾಥ್ ಆಲಿಯಾಸ್ ಸ್ಯಾಂಟ್ರೊ ರವಿಯ ಅಕ್ರಮ ಆಸ್ತಿ ಹಾಗೂ ವ್ಯವಹಾರದ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಒಡನಾಡಿ ಸಂಸ್ಥೆ ಕಾರ್ಯದರ್ಶಿಗಳಾದ ಸ್ಟ್ಯಾನ್ಲಿ ಮತ್ತು ಪರಶುರಾಮ್‌ ಅವರು ಸೋಮವಾರ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಭಾಸ್ಕರ್‌ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಜೊತೆಗೆ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕೋರ್ಟ್‌ ರಿಜಿಸ್ಟ್ರಾರ್‌, ಡಿಜಿಪಿ ಪ್ರವೀಣ್‌ ಸೂದ್‌ ಹಾಗೂ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿಗೂ ಇ– ಮೇಲ್‌ ಮೂಲಕ ಮನವಿ ಸಲ್ಲಿಸಿದ್ದಾರೆ. ಮನವಿಯೊಂದಿಗೆ, ಮೈಸೂರಿನಲ್ಲಿ ಆತನ ವಿರುದ್ಧ ಜ.2ರಂದು ದಾಖಲಾಗಿರುವ ಎಫ್‌ಐಆರ್‌ ಪ್ರತಿಯನ್ನೂ ನೀಡಿದ್ದಾರೆ.

ಪತ್ರದಲ್ಲೇನಿದೆ?: ‘ರವಿ ಅಮಾಯಕ ಹೆಣ್ಣುಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಮಾರಾಟ ಮಾಡಿ, ಕೆಲವು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ತೊಡಗಿ, ಅಕ್ರಮವಾಗಿ ಹಣ ಸಂಪಾದಿಸಿ, ಸಮಾಜಕ್ಕೆ ತೊಡಕಾಗಿದ್ದಾನೆ. ಹಣ, ಉದ್ಯೋಗ ಮತ್ತು ಐಷಾರಾಮಿ ಜೀವನದ ಆಮಿಷ ಒಡ್ಡಿ ವೇಶ್ಯಾವಾಟಿಕೆಗೆ ದೂಡಿದ್ದಾನೆ’ ಎಂದು ಆರೋಪಿಸಿರುವ ಅವರು, ಆರೋಪಿಯ ಬೆಂಗಳೂರು ಮತ್ತು ಮೈಸೂರಿನ ಮನೆಯ ವಿಳಾಸ ಹಾಗೂ ಮೈಸೂರಿನಲ್ಲಿ ಎರಡು ಕಡೆ ಇರುವ ಆತನ ಹಣಕಾಸು ಸಂಸ್ಥೆಯ ವಿಳಾಸಗಳನ್ನೂ ನೀಡಿದ್ದಾರೆ.

ADVERTISEMENT

‘₹ 20 ಸಾವಿರಕ್ಕಿಂತಲೂ ಹೆಚ್ಚಿನ ಹಣವನ್ನು ಅಕ್ರಮವಾಗಿಟ್ಟುಕೊಳ್ಳಬಾರದು ಎಂಬ ನಿಯಮ ಮೀರಿ ಆರೋಪಿ ಮನೆಯಲ್ಲಿ ಹೆಚ್ಚು ಹಣ ಇಟ್ಟುಕೊಂಡಿದ್ದ. ಕಾನೂನುಬಾಹಿರ ಚಟುವಟಿಕೆಯಿಂದ ಸಂಗ್ರಹಿಸಿದ್ದ ಹಣದಿಂದ ಆತ ಹಣಕಾಸು ಸಂಸ್ಥೆ ಸ್ಥಾಪಿಸಿದ್ದ. ಸಂಸ್ಥೆಯಲ್ಲಿ ಕೆಲಸ ನೀಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಅಲ್ಲಿಗೆ ಬರುತ್ತಿದ್ದ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಂಡಿದ್ದಾನೆ‘ ಎಂದು ದೂರಿದ್ದಾರೆ.

‘ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಮೈಸೂರಿನ ದಟ್ಟಗಳ್ಳಿಯಲ್ಲಿ ನಿವೇಶನ ಖರೀದಿಸಿದ್ದು, 2022ರ ಜೂನ್‌ನಲ್ಲಿ ನೋಂದಣಿ ಮಾಡಿಸಿದ್ದಾನೆ. ವರ್ಗಾವಣೆಗೆ ಹಣ ಸಂಗ್ರಹಿಸಲು ಅಧಿಕಾರಿಗಳೊಡನೆ ಶಾಮೀಲಾಗಿ, ಕುಮಾರಕೃಪಾ ಅತಿಥಿಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದಾನೆ. ಕೆಲವು ಐಎಎಸ್‌, ಐಪಿಎಸ್‌ ಹಾಗೂ ಉನ್ನತ ಅಧಿಕಾರಿಗಳು ಆತನ ಮೂಲಕ ಹಣ ತೊಡಗಿಸಿದ್ದಾರೆ’ ಎಂದು ದೂರಿ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.

2005ರಲ್ಲಿ ಅಂದಿನ ಮೈಸೂರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರು ಹೊರಡಿಸಿದ್ದ ಬಂಧನದ ಆಜ್ಞೆಯ ಪ್ರತಿಯನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.