ADVERTISEMENT

ಆರೋಪಿ ಬಂಧಿಸಲು ತೆರಳಿದ್ದ ಜಿಗಣಿ ಪೊಲೀಸರು ಒಡಿಶಾದಲ್ಲಿ ಬಂಧನ!

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 19:47 IST
Last Updated 3 ನವೆಂಬರ್ 2023, 19:47 IST
   

ಆನೇಕಲ್: ಗಾಂಜಾ ಆರೋಪಿ ಬಂಧಿಸಲು ಒಡಿಶಾಗೆ ತೆರಳಿದ್ದ ಆನೇಕಲ್‌ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆಯ ಪೇದೆಯೊಬ್ಬರನ್ನು ಅಲ್ಲಿಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

 ಒಡಿಶಾದ ಕಂದಮಾಲ್‌ ಜಿಲ್ಲೆಯ ಸಾರಂಗಡ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಸಂಜಯ್‌ ರಾವುತ್‌ ಸೇರಿದಂತೆ ಮೂವರನ್ನು ಜಿಗಣಿ ಪೊಲೀಸರು ಅಕ್ಟೋಬರ್‌ 13ರಂದು ಬಂಧಿಸಿದ್ದರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಒಡಿಶಾದಿಂದ ಗಾಂಜಾ ತಂದಿರುವುದಾಗಿ ಹೇಳಿದ್ದ. ಆತ ನೀಡಿದ್ದ ಮಾಹಿತಿ ಮೇರೆಗೆ ಜಿಗಣಿ ಪೊಲೀಸ್‌ ಠಾಣೆಯ ಆರು ಪೊಲೀಸ್‌ ಸಿಬ್ಬಂದಿ ಮತ್ತು ಒರಿಯಾ ಭಾಷೆ ಬಲ್ಲ ಯುವಕನೊಂದಿಗೆ ಒಡಿಶಾಗೆ ತೆರಳಿದ್ದರು.

ADVERTISEMENT

ಒಡಿಶಾದ ಕಾಡಂಚಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಕಲೆಹಾಕಿ ಕ್ರೈಂ ಕಾನ್‌ಸ್ಟೆಬಲ್‌ ಆನಂದ್‌ ಮತ್ತು ಆರೋಪಿಯ ಪರಿಚಯಸ್ಥ ಶಾಮ್‌ ಹಾಗೂ ಜಿಗಣಿಯ ಯುವಕ ಮಾರುವೇಷದಲ್ಲಿ ಗಾಂಜಾ ಖರೀದಿ ಮಾಡುವ ನೆಪದಲ್ಲಿ ಸ್ಥಳಕ್ಕೆ ತೆರಳುತ್ತಿದ್ದರು.

17 ಕೆ.ಜಿ ಗಾಂಜಾ ವಶಕ್ಕೆ ಪಡೆದು ಕಾಡಿನಿಂದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ಸಂದರ್ಭದಲ್ಲಿ ಒಡಿಶಾದ ಪೊಲೀಸರು ಜಿಗಣಿಯ ಪೊಲೀಸ್‌ ಕಾನ್‌ಸ್ಟೇಬಲ್‌ ಆನಂದ್‌ ಅವರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಗಾಂಜಾ ಸರಬರಾಜು ಮಾಡಲು ಬಂದಿದ್ದ ಒಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಆನಂದ್‌ ಮತ್ತು ಒರಿಯಾ ಭಾಷೆ ಬಲ್ಲ ಜಿಗಣಿಯ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್‌ ದಾಖಲೆ ತೋರಿಸಿದರೂ ಒಡಿಶಾ ಪೊಲೀಸರು ನಂಬದೇ ವಶದಲ್ಲಿಟ್ಟುಕೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಎಸ್‌.ಪಿ ಮಲ್ಲಿಕಾರ್ಜುನ ಬಾಲದಂಡಿ ಒಡಿಶಾ ಪೊಲೀಸರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಹೆಚ್ಚುವರಿ ಎಸ್‌.ಪಿ ಎಂ.ಎಲ್‌.ಪುರುಷೋತ್ತಮ್‌ ಮತ್ತು ಇನ್‌ಸ್ಪೆಕ್ಟರ್‌ ಮಂಜುನಾಥ್‌ ಅವರು ಸಿಬ್ಬಂದಿಯನ್ನು ಕರೆ ತರಲು ಒಡಿಶಾಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.