ADVERTISEMENT

ಮೈಸೂರು: ಮುಖ್ಯಮಂತ್ರಿ ಸಭೆಗಾಗಿ ಮೂರು ತಾಸು ಕಾದು ಕುಳಿತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 8:12 IST
Last Updated 9 ಆಗಸ್ಟ್ 2021, 8:12 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಮೈಸೂರು: ಮುಖ್ಯಮಂತ್ರಿ ನಡೆಸುವ ಸಭೆಗಾಗಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಸುಮಾರು ಮೂರು ತಾಸು ಕಾದು ಕುಳಿತ ಪ್ರಸಂಗ ಸೋಮವಾರ ನಡೆಯಿತು.

ಜಿಲ್ಲಾ ಪಂಚಾಯಿತಿಯಲ್ಲಿ ಬೆಳಿಗ್ಗೆ11.15 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನೆ ಸಭೆ ನಡೆಸಲು ಸಮಯ ನಿಗದಿಪಡಿಸಲಾಗಿತ್ತು. ಅಧಿಕಾರಿಗಳು ಮುಕ್ಕಾಲು ತಾಸು ಮೊದಲೇ ಬಂದು ಆಸೀನರಾಗಿದ್ದರು. ಆದರೆ, ಚಾಮುಂಡಿ ದರ್ಶನ ಪಡೆದು, ಬಿಜೆಪಿ ಕಚೇರಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿಗೆ ಬರುವಷ್ಟರಲ್ಲಿ ಮಧ್ಯಾಹ್ನ 12.30 ಆಗಿತ್ತು.ಬಂದ ತಕ್ಷಣ ಮೊದಲು ಶಾಸಕರು ಹಾಗೂ ಜಿಲ್ಲಾಧಿಕಾರಿ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಸುಮಾರು ನೂರು ಅಧಿಕಾರಿಗಳ ಕಾಯುವಿಕೆ ಮುಂದುವರಿಯಿತು. ಕೊನೆಗೂ ಅಧಿಕಾರಿಗಳ ಸಭೆ ನಡೆಯಲೇ ಇಲ್ಲ.

ಜನಜಂಗುಳಿ: ಚಾಮುಂಡಿ ಬೆಟ್ಟ, ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ, ಸಚಿವರನ್ನು ಸ್ವಾಗತಿಸಲು ಅಪಾರ ಪ್ರಮಾಣದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ಹಾರ ಹಾಕಲು ನೂಕು ನುಗ್ಗಲು ಸಂಭವಿಸಿತು. ಕೋವಿಡ್ ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.