ADVERTISEMENT

ಖಾದ್ಯ ತೈಲ ಪೂರೈಕೆ ವಿಳಂಬ: ಏರಲಿದೆ ಬೆಲೆ

ವಿದೇಶಗಳ ಮೇಲೆ ಹೆಚ್ಚು ಅವಲಂಬನೆ l ಶೇ 75ರಷ್ಟು ಆಮದು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 20:00 IST
Last Updated 12 ಏಪ್ರಿಲ್ 2020, 20:00 IST
   

ಬೆಂಗಳೂರು: ವಿದೇಶಗಳಿಂದ ಆಮದು ಮಾಡಿಕೊಳ್ಳುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಖಾದ್ಯತೈಲಗಳ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಕಳೆದ ಎರಡು ತಿಂಗಳಲ್ಲಿ ಅಡುಗೆ ಎಣ್ಣೆಯಬೆಲೆ ಪ್ರತಿ 10 ಕೆಜಿಗೆ ಸರಾಸರಿ ₹90 ಏರಿಕೆಯಾಗಿದೆ.

‘ದೇಶದ ಒಟ್ಟು ಬೇಡಿಕೆಯಲ್ಲಿ ಶೇ 75ರಷ್ಟು ಖಾದ್ಯತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಲಾಕ್‌ಡೌನ್‌ಗಿಂತ ಮೊದಲು ತೈಲ ಪೂರೈಕೆ ಕಂಪನಿಗಳು ಮತ್ತು ಮಾರಾಟಗಾರರು ನೇರವಾಗಿ ವಿದೇಶಗಳಿಂದ ಖರೀದಿಸುತ್ತಿದ್ದರು. ಈಗ ಇದಕ್ಕೆ ಅವಕಾಶವಿಲ್ಲ. ಸರ್ಕಾರದಿಂದ ಅನುಮತಿ ಪಡೆಯಬೇಕು. ನಾವು ಬೇಡಿಕೆ ಸಲ್ಲಿಸಿ, 15ರಿಂದ 20 ದಿನಗಳ ನಂತರ ಪೂರೈಸಲಾಗುತ್ತಿದೆ’ ಎಂದು ಖಾದ್ಯತೈಲ ವರ್ತಕ ಎನ್.ಆರ್. ವಿಶ್ವಾರಾಧ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ಇವರು ರಾಜ್ಯ ರೈಸ್‌ ಮತ್ತು ಆಯಿಲ್‌ ಮಿಲ್‌ಗಳ ಸಂಘದ ಮಾಜಿ ಅಧ್ಯಕ್ಷ.

‘ಗೃಹ ಬಳಕೆಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಪೂರೈಕೆ ವಿಳಂಬವಾಗುತ್ತಿರುವುದರಿಂದ ಬೆಲೆಯೂ ಏರಲಿದೆ. ಖಾದ್ಯ ತೈಲದ ಬೆಲೆಯೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಧಾರವಾಗುತ್ತದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಂತೆ ಖಾದ್ಯ ತೈಲದ ಬೆಲೆಯೂ ಹೆಚ್ಚಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

ತಾಳೆ ಎಣ್ಣೆಗೆ ಬೇಡಿಕೆ

ಬೆಲೆ ಕಡಿಮೆ ಇರುವುದು ಮತ್ತು ಬೇರೆ ಎಣ್ಣೆಗೆ ಹೋಲಿಸಿದರೆ, ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿರುವ ತಾಳೆ ಎಣ್ಣೆಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ. ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ಪ್ರಮುಖವಾಗಿ ಈ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಮಲೇಷ್ಯಾದಿಂದ ಈ ತೈಲ ಆಮದಿಗೆ ನಿರ್ಬಂಧ ವಿಧಿಸಿದ ಮೇಲೆ, ದೇಶದಲ್ಲಿ ಪೂರೈಕೆಯೂ ಕಡಿಮೆಯಾಗಿದೆ ಎಂದರು.

ಸ್ಥಳೀಯ ಉತ್ಪಾದನೆ ಕಡಿಮೆ

‘ರಾಜ್ಯದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸೂರ್ಯಕಾಂತಿ ಮತ್ತು ಶೇಂಗಾ ಬೆಳೆಯಲಾಗುತ್ತದೆ. ಆದರೆ, ಪೂರ್ಣ ಪ್ರಮಾಣದ ಬೇಡಿಕೆ ಇದರಿಂದ ನೀಗುವುದಿಲ್ಲ. ಗುಜರಾತ್‌ ಮತ್ತು ಆಂಧ್ರಪ್ರದೇಶದಿಂದ ಶೇಂಗಾ ಎಣ್ಣೆ ರಾಜ್ಯಕ್ಕೆ ಪೂರೈಕೆಯಾಗುತ್ತದೆ. ಡಿಸೆಂಬರ್‌ನಲ್ಲಿ ಉತ್ತರ ಭಾರತದಿಂದ ಸಾಸಿವೆ ಎಣ್ಣೆ ರಾಜ್ಯಕ್ಕೆ ಬರುತ್ತದೆ. ಆದರೆ, ತಾಳೆಎಣ್ಣೆಗಾಗಿ ನಾವು ವಿದೇಶವನ್ನೇ ಅವಲಂಬಿಸಬೇಕಾಗಿರುವುದರಿಂದ ಕೊರತೆ ಉಂಟಾಗಿದೆ’ ಎಂದು ಅವರು ತಿಳಿಸಿದರು.

‘ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸೇರಿದಂತೆ ವಾಣಿಜ್ಯ ಬಳಕೆ ಶೇ 60ರಷ್ಟು ಕಡಿಮೆಯಾಗಿರುವುದರಿಂದ ಖಾದ್ಯತೈಲ ಕೊರತೆ ಹೆಚ್ಚು ಬಾಧಿಸುತ್ತಿಲ್ಲ. ಪೂರೈಕೆಯಲ್ಲಿ ಸಾಕಷ್ಟು ವಿಳಂಬವಾದರೆ ಮಾತ್ರ ಕೊರತೆ ಹೆಚ್ಚಾಗಿ ಬೆಲೆಯೂ ಹೆಚ್ಚಲಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.