ಕೆಂಗೇರಿ (ಬೆಂಗಳೂರು): ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಸಂಸ್ಥಾಪಕ ಪೀಠಾಧ್ಯಕ್ಷ
ಕುಮಾರ ಚಂದ್ರಶೇಖರನಾಥ ಸ್ವಾಮೀಜಿ (81) ಅವರು ಕೆಂಗೇರಿ ಮಠದಲ್ಲಿ ಶುಕ್ರವಾರ ಮಧ್ಯರಾತ್ರಿ ನಿಧನರಾದರು.
2021ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಂದ್ರಶೇಖರನಾಥ ಸ್ವಾಮೀಜಿ, ಇತ್ತೀಚೆಗೆ ಚೇತರಿಸಿಕೊಂಡು, ಆಸ್ಪತ್ರೆಯಿಂದ ಮಠಕ್ಕೆ ಬಂದಿದ್ದರು.
ಮಠದ ಉತ್ತರಾಧಿಕಾರಿ ನಿಶ್ಚಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕೆಂಗೇರಿಯಲ್ಲಿರುವ ಮಠದ ಆವರಣದಲ್ಲಿ ನಾಥ ಸಂಪ್ರದಾಯದಂತೆ ಚಂದ್ರಶೇಖರನಾಥ ಸ್ವಾಮೀಜಿಯವರ ಅಂತ್ಯಸಂಸ್ಕಾರ ಶನಿವಾರ ಸಂಜೆ ನೆರವೇರಿತು.
2003ರಲ್ಲಿ ಒಕ್ಕಲಿಗರ ಪರ್ಯಾಯ ಮಠವಾಗಿ ರೂಪುಗೊಂಡ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಗುರುಜ್ಞಾನ ಕೇಂದ್ರ ಟ್ರಸ್ಟ್ ಮೂಲಕ ಬಡ, ದಲಿತ ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನ ದಾಸೋಹ ಕಾಯಕ ನಡೆಸುತ್ತಿದ್ದರು. ಮಠದ ಮೂಲಕ ವೈದ್ಯಕೀಯ ಮಹಾವಿದ್ಯಾಲಯ ತೆರೆಯುವ ಆಸೆ ಹೊಂದಿದ್ದರು.
ಕೆ.ಆರ್. ಪೇಟೆಯ ಬಸ್ ಮಾಲೀಕ ತಿಮ್ಮೇಗೌಡ ಹಾಗೂ ಸಣ್ಣಮ್ಮ ದಂಪತಿಯ ಪುತ್ರರಾಗಿ 1945ರ ಫೆಬ್ರುವರಿ 10ರಂದು ಜನಿಸಿದ್ದ ಗೋವಿಂದೇಗೌಡರು, ಬಾಲ್ಯ ದಿಂದಲೇ ಆಧ್ಯಾತ್ಮಿಕ ಒಲವು ಹೊಂದಿದ್ದರು. 1968ರಲ್ಲಿ ಆದಿಚುಂಚನ ಗಿರಿ ಪೀಠಾಧಿಪತಿ ರಮಾನಂದನಾಥ ಸ್ವಾಮೀಜಿಯವರ ಮೊದಲ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿ, ಚಂದ್ರಶೇಖರನಾಥ ಸ್ವಾಮೀಜಿ ಎಂದು ನಾಮಾಂಕಿತರಾದರು.
ರಾಜರಾಜೇಶ್ವರಿನಗರದ ತಿರುಚ್ಚಿ ಸ್ವಾಮೀಜಿಯವರ ಗುರುಕುಲದಲ್ಲಿ ಶಾಸ್ತ್ರ ಅಭ್ಯಾಸ, ವೇದ ಉಪನಿಷತ್ ಪಠಣ ಮಾಡಿದ್ದರು. ಬಿ.ಕಾಂ ಪದವೀಧರರಾದ ಸ್ವಾಮೀಜಿ, ಅದ್ವೈತ ವೇದಾಂತದಲ್ಲಿ ವಿದ್ವತ್ ಪದವಿ ಗಳಿಸಿದ್ದರು.
ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಿರಾದ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ನಿಧನರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪರಮಪೂಜ್ಯ ಜಗದ್ಗುರುಗಳಾದ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ಭೈರವೈಕ್ಯರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಆಧ್ಯಾತ್ಮ ಲೋಕದಲ್ಲಿ ಮಹೋನ್ನತ ಸಾಧನೆ ಮಾಡಿದ್ದ ಪರಮಪೂಜ್ಯರು ಸಮಾಜ ಸೇವೆ ಹಾಗೂ ಧರ್ಮ ಕೈಂಕರ್ಯದಲ್ಲಿ ಸದಾ ಮುಂಚೂಣಿಯಲ್ಲಿ ಇದ್ದರು ಎಂದು ಹೇಳಿದ್ದಾರೆ.
ಪರಮಪೂಜ್ಯರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಕ್ತರಿಗೆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಕುಮಾರಸ್ವಾಮಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪರಮಪೂಜ್ಯ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳ ನಿಧನದ ಸುದ್ದಿ ಆಘಾತ ಮೂಡಿಸಿದೆ. ಭಗವಂತ ಶ್ರೀಗಳ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಭಕ್ತವೃಂದಕ್ಕೆ, ಶಿಷ್ಯರಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ' ಎಂದು ಪ್ರಾರ್ಥಿಸುವುದಾಗಿ ಆರ್.ಅಶೋಕ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ವಿಶ್ವ ಒಕ್ಕಲಿಗರ ಮಠದ ಮಠಾಧೀಶರಾಗಿದ್ದ ಕುಮಾರ ಚಂದ್ರಶೇಖರ ಸ್ವಾಮೀಜಿ ಅವರು ಭೈರವೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಪೂಜನೀಯರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ. ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಸಮಸ್ತ ಭಕ್ತವೃಂದಕ್ಕೆ ನೀಡಲಿ' ಎಂದು ಪ್ರಾರ್ಥಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.