ADVERTISEMENT

‘ತಾಯ್ನಾಡ ಕಟ್ಟಲು ಅನುಭವದ ಧಾರೆ ಹರಿಸಿ’

ಅಮೆರಿಕದ ಒಕ್ಕಲಿಗರ ಪರಿಷತ್ ಸಮಾವೇಶದಲ್ಲಿ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 16:41 IST
Last Updated 5 ಜುಲೈ 2019, 16:41 IST
‘ಒಕ್ಕಲಿಗರ ಪರಿಷತ್‌, ಅಮೆರಿಕ’ವು ನ್ಯೂಜೆರ್ಸಿಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಸಚಿವ ಸಾ.ರಾ. ಮಹೇಶ್, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಪರಿಷತ್ತಿನ ಪ್ರಮುಖರು ಪಾಲ್ಗೊಂಡಿದ್ದರು.
‘ಒಕ್ಕಲಿಗರ ಪರಿಷತ್‌, ಅಮೆರಿಕ’ವು ನ್ಯೂಜೆರ್ಸಿಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಸಚಿವ ಸಾ.ರಾ. ಮಹೇಶ್, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಪರಿಷತ್ತಿನ ಪ್ರಮುಖರು ಪಾಲ್ಗೊಂಡಿದ್ದರು.   

ಬೆಂಗಳೂರು: ‘ನಿಮ್ಮ ಅಪಾರ ಅನುಭವ, ಅಸೀಮ ಬುದ್ಧಿವಂತಿಕೆಯ ಪ್ರಯೋಜನ ತಾಯ್ನಾಡಿಗೂ ಹರಿದು ಬರುವಂತಾಗಲಿ. ದೇಶದೇವಿಯ ಪೂಜೆಗೆ ನಿಮ್ಮ ಪಾಲೂ ಸಲ್ಲಲಿ. ನಿಮ್ಮ ಕೊಡುಗೆ ಕರ್ನಾಟಕವನ್ನು ನವಪಥದಲ್ಲಿ ಮುನ್ನಡೆಸುವಂತಾಗಲಿ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕದಲ್ಲಿ ನೆಲೆಸಿರುವವರಿಗೆ ಮನವಿ ಮಾಡಿದ್ದಾರೆ.

‘ಒಕ್ಕಲಿಗರ ಪರಿಷತ್‌, ಅಮೆರಿಕ’ದ ಸಮಾವೇಶವನ್ನು ನ್ಯೂಜೆರ್ಸಿಯಲ್ಲಿ ಅಲ್ಲಿನ ಕಾಲಮಾನ ಬೆಳಿಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 8ಗಂಟೆ) ಉದ್ಘಾಟಿಸಿ ಮಾತನಾಡಿದ ಅವರು,‘ಕರ್ನಾಟಕದಲ್ಲಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಪ್ರವಾಸೋದ್ಯಮ, ಸಣ್ಣ ಕೈಗಾರಿಕೆ, ಸಾವಯವ ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಈ ಕ್ಷೇತ್ರಗಳ ಅಗಣಿತ ಸಾಧ್ಯತೆಗಳನ್ನು ಅರಿತುಕೊಂಡು ಅದನ್ನು ಕಾರ್ಯರೂಪಕ್ಕೆ ತರುವ ಇಚ್ಛಾಶಕ್ತಿಯ ಅಗತ್ಯವೂ ಇದೆ. ನಾವೆಲ್ಲ ಸೇರಿ ಎಲ್ಲ ಜಾತಿ ಧರ್ಮ ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿ ಕರ್ನಾಟಕವನ್ನು ಕಟ್ಟೋಣ’ ಎಂದರು.

‘ಕೃಷಿ ಆಧಾರಿತ ನಮ್ಮ ದೇಶದಲ್ಲಿ ಕೃಷಿಕರನ್ನು ಅನೇಕ ಹೆಸರುಗಳಿಂದ ಕರೆದರೂ ಕರ್ನಾಟಕದಲ್ಲಿ ಮಾತ್ರ ಅವರಿಗೆ ಒಕ್ಕಲಿಗರೆನ್ನುತ್ತಾರೆ. ದೀಪದಂತೆ ಬೆಳಗುವ, ಭ್ರಾತೃ ಭಾವದ ಸೆಲೆಯಾಗಿರುವ, ಸಮಾಜದ ಒಳಿತೆಲ್ಲವನ್ನೂ ಒಗ್ಗೂಡಿಸುವ ಒಕ್ಕಲಿಗ ಸಮುದಾಯದ ಬಹುದೊಡ್ಡ ಪರಂಪರೆ ಕರ್ನಾಟಕದ್ದಾಗಿದೆ. ಒಕ್ಕಲಿಗರ ಪರಿಷತ್ ಬೆಸೆದ ಬಂಧವು ಇಂದು ಕರ್ನಾಟಕದ ಧೀಮಂತ ಸಂಸ್ಕೃತಿ ಮತ್ತು ಅಮೆರಿಕೆಯ ಆಧುನಿಕ ಸಂಸ್ಕೃತಿಗಳ ನಡುವೆ ನಿರ್ಮಿಸಿದ ಸೇತುವಾಗಿದೆ. ದೂರದ ನೆಲೆದಲ್ಲಿದ್ದೂ ತಾಯ್ನೆಲದ ಬಗ್ಗೆ ಇಟ್ಟುಕೊಂಡಿರುವ ಕಳಕಳಿ ಅನನ್ಯ’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.

ADVERTISEMENT

ಕನ್ನಡದ ಸಂಗೀತಗಾರರು, ಕಲಾವಿದರು, ಸಾಹಿತಿಗಳು, ಜನಪದರು ಎಲ್ಲರಿಗೂ ತಮ್ಮ ಪ್ರತಿಭೆಯನ್ನು ಪಾಶ್ಚಿಮಾತ್ಯ ಸಂಸ್ಕತಿಗೆ ಪರಿಚಯಿಸುವ ಅವಕಾಶವನ್ನು, ಕನ್ನಡದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುವ ಸಂದರ್ಭಗಳನ್ನು ಒದಗಿಸಿಕೊಡುತ್ತಿರುವ ಒಕ್ಕಲಿಗರ ಪರಿಷತ್ ಕನ್ನಡದ ಸಂಸ್ಕೃತಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಭವಿಷ್ಯದಲ್ಲಿ ಕನ್ನಡದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಕಲ್ಪವನ್ನೂ ಕೈಗೊಳ್ಳಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.