ADVERTISEMENT

ಒಕ್ಕಲಿಗರ ಸಂಘ: ಆಡಳಿತಾಧಿಕಾರಿ ಖುದ್ದು ಹಾಜರಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 16:31 IST
Last Updated 1 ಡಿಸೆಂಬರ್ 2021, 16:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಆಕ್ಷೇಪಣೆಗಳ ಬಗ್ಗೆ ವಿವರಣೆ ನೀಡಲು ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.

ಸಂಘದ ಸದಸ್ಯ ಸ್ಥಾನ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ತಕರಾರುಗಳ ಬಗ್ಗೆ ಕೆ.ಸಿ. ಜಯರಾಮ್ ಸೇರಿದಂತೆ ಆರು ಜನ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಆಡಳಿತಾಧಿಕಾರಿಯ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ,‘ಬಹುಕೋಟಿ ರೂಪಾಯಿಗಳ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಹೊತ್ತ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ವಿಚಾರ ಪರಿಶೀಲಿಸುವಂತೆ ಈ ಹಿಂದೆಯೇ ಹೈಕೋರ್ಟ್ ಸೂಚಿಸಿದೆ. ಆದರೂ ಆಡಳಿತಾಧಿಕಾರಿ ಈ ಸೂಚನೆ ಸೂಚನೆ ಪಾಲಿಸಿಲ್ಲ. ಆದ್ದರಿಂದ, ಆಡಳಿತಾಧಿಕಾರಿ ಇದೇ 4ರಂದು ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು’ ಎಂದು ಆದೇಶಿಸಿದೆ.

ADVERTISEMENT

‘ಶಿಕ್ಷಣ, ಆಸ್ಪತ್ರೆ ಮತ್ತು ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿರುವಒಕ್ಕಲಿಗರ ಸಂಘಕ್ಕೆ ಬಹಳ ಒಳ್ಳೆಯ ಹೆಸರಿತ್ತು. ಆದರೆ, ಆ ಘನತೆಗೆ ಕೆಲವರಿಂದ ಧಕ್ಕೆಯಾಗಿದೆ. ಮುಂದಿನ ಜನಾಂಗಕ್ಕೆ ಒಕ್ಕಲಿಗರ ಸಂಘ ಉಳಿಯಬೇಕಿದೆ. ಒಳ್ಳೆಯ ಸಂಘ ಸಂಸ್ಥೆಗಳು ಉಳಿಯದಿದ್ದರೆ ಸಮಾಜವೇ ಹಾಳಾಗುತ್ತದೆ’ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ‘ಆಡಳಿತಾಧಿಕಾರಿ ಒಂದು ವೇಳೆ ಸಮರ್ಪಕ ಉತ್ತರ ನೀಡದಿದ್ದರೆ ಗಂಭೀರವಾದ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ.

‘ನಮ್ಮ ಸದಸ್ಯತ್ವ ರದ್ದುಪಡಿಸಲಾಗಿದೆ ಮತ್ತು ಮತದಾರರ ಪಟ್ಟಿಯಿಂದಲೂ ನಮ್ಮ ಹೆಸರು ಕೈಡಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ. ಇದೇ 12ರಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.