ADVERTISEMENT

ಒಳನೋಟ| ಕಾಡಿನ ನಾಶವೇ, ಅಂತರ್ಜಲ ಕುಸಿತಕ್ಕೆ ಕಾರಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:42 IST
Last Updated 25 ಜನವರಿ 2020, 19:42 IST
   

ಕಾಡಿನಲ್ಲಿರುವ ಗಿಡ ಮರಗಳು ಮಳೆ ನೀರನ್ನು ಭೂಮಿಗೆ ಇಂಗಿಸುವ ಕೆಲಸ ಮಾಡುತ್ತವೆ. ಸ್ಥಳೀಯ ಸಸ್ಯ ಪ್ರಭೇದಗಳಿರುವ ಅಂಥ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿರುವುದರಿಂದ ಭೂಮಿಯಲ್ಲಿ ನೀರು ಇಂಗುತ್ತಿಲ್ಲ. ಮಣ್ಣಿನಲ್ಲೂ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ಸುರಿವ ಮಳೆ ನೀರೆಲ್ಲ ಹರಿದು ಹೋಗಿ ಸಮುದ್ರ ಸೇರುತ್ತಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಲು ಇದೂ ಒಂದು ಕಾರಣ.

ಪಶ್ಚಿಮಘಟ್ಟದಲ್ಲಿ 1973ರಲ್ಲಿ ಶೇ 63ರಷ್ಟಿದ್ದ ಅರಣ್ಯ ಪ್ರದೇಶ ಈಗ ಶೇ 30 ರಷ್ಟಾಗಿದೆ. ಶಿವಮೊಗ್ಗ ಭಾಗದಲ್ಲಿ ಶೇ 51 ಇದ್ದು ಶೇ 22ಕ್ಕಿಳಿದಿದೆ. ಬೆಂಗಳೂರಿನಲ್ಲಿ 1970ರಲ್ಲಿ ಶೇ 69ರಷ್ಟು ಹಸಿರಿತ್ತು. ಶೇ 7 ರಷ್ಟು ಬಿಲ್ಡಿಂಗ್‌ಗಳು ಇದ್ದವು. ಈಗ ಶೇ 81ರಷ್ಟು ಕಾಂಕ್ರೀಟ್ ಕಾಡಾಗಿದೆ. ಶೇ 3ರಷ್ಟು ಮಾತ್ರ ಗಿಡಮರಗಳಿವೆ. ನಾಲ್ಕು ದಶಕಗಳಲ್ಲಿ ಶೇ 88ರಷ್ಟು ಗಿಡ ಮರಗಳು ನಾಶವಾಗಿವೆ. ಶೇ 79ರಷ್ಟು ಕೆರೆ ಕುಂಟೆ ಕಳೆದುಕೊಡಿದ್ದೇವೆ. ಇಂಥ ನೀರು ಇಂಗಿಸುವ ರಚನೆಗಳಿಲ್ಲದ ಕಾರಣ ಬೆಂಗಳೂರಿನ ಕೆಲವು ಕಡೆ 1200 ಅಡಿ ಕೊರೆದರೂ ನೀರು ಸಿಗದಂತಾಗಿದೆ. 2007ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೆರೆ ಮುಚ್ಚಿದ ಐದು ವರ್ಷಗಳಲ್ಲಿ ಆ ಭಾಗದಲ್ಲಿ ಅಂತರ್ಜಲ 700 – 800 ಅಡಿಗೆ ಇಳಿದಿತ್ತು. ಈಗ ಅದೇ ಪ್ರದೇಶದಲ್ಲಿ 1900 ಅಡಿಗೆ ಹೋದರೂ ನೀರು ಸಿಗುತ್ತಿಲ್ಲ.

ಪರಿಹಾರ ಏನು ?
ಸ್ಥಳೀಯ ಸಸ್ಯ ಪ್ರಭೇದಗಳಿರುವ ಕಾಡುಗಳ ಅರಣ್ಯ ರಕ್ಷಣೆಯಾಗಬೇಕು. ಆ ಕಾಡಿನ ಪ್ರಮಾಣವೂ ವೃದ್ಧಿಯಾಗಬೇಕು. ಪ್ರಾಥಮಿಕ ಹಂತದಿಂದಲೇ ಕಡ್ಡಾಯವಾಗಿ ಮಕ್ಕಳಿಗೆ ಪರಿಸರ ಶಿಕ್ಷಣ ಸಿಗುವಂತಾಗಬೇಕು. ಇದರಿಂದ ಈ ಪೀಳಿಗೆಗಲ್ಲದಿದ್ದರೂ ಮುಂದಿನ ಪೀಳಿಗೆಗಾದರೂ ಉತ್ತಮ ಪರಿಸರ ನಿರ್ಮಾಣವಾಗುತ್ತದೆ.

- ಡಾ.ಟಿ.ವಿ.ರಾಮಚಂದ್ರ, ವಿಜ್ಞಾನಿ, ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.