ADVERTISEMENT

ಆನೇಕಲ್‌ನಲ್ಲಿ ವೃದ್ಧೆ ಕೊಲೆ ಮಾಡಿ ಕಪಾಟಿನಲ್ಲಿ ಶವವಿಟ್ಟು ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 3:08 IST
Last Updated 5 ಡಿಸೆಂಬರ್ 2022, 3:08 IST
ಪಾರ್ವತಮ್ಮ
ಪಾರ್ವತಮ್ಮ   

ಆನೇಕಲ್: ಮೂರು ದಿನಗಳಿಂದ ಕಾಣೆಯಾಗಿದ್ದ ತಾಲ್ಲೂಕಿನ ನೆರಳೂರು ಗ್ರಾಮದ ವೃದ್ಧೆ ಪಕ್ಕದ ಮನೆಯ ಕಪಾಟಿನಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಮೂಲದ ಪಾರ್ವತಮ್ಮ (80) ಕೊಲೆಯಾದವರು.

ಪಾರ್ವತಮ್ಮ ಅವರ ಪುತ್ರ ರಮೇಶ್‌ ಅವರು ನೆರಳೂರಿನಲ್ಲಿ ವಾಸವಿದ್ದರು. 20 ದಿನದ ಹಿಂದೆ ಮೊಮ್ಮಕ್ಕಳನ್ನು ನೋಡಲು ಮಗನ ಮನೆಗೆ ಬಂದಿದ್ದರು. ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಈ ಬಗ್ಗೆ ಅವರ ಮಗ ಅತ್ತಿಬೆಲೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಒಂಟಿಯಾಗಿ ಬಾಡಿಗೆಗಿದ್ದ ಮಹಿಳೆ ಪಾವಲ್‌ ಖಾನ್‌ (26) ಆಗಾಗ ಪಾರ್ವತಮ್ಮ ಅವರನ್ನು ಮನೆಗೆ ಕರೆಯುತ್ತಿದ್ದರು. ಪಾರ್ವತಮ್ಮ ಕಾಣೆಯಾದ ನಂತರ ಪಾವಲ್‌ ಖಾನ್‌ ಕೂಡ ಹುಡುಕಾಟ ನಡೆಸಿದ್ದು, ಮೂರನೇ ದಿನ ನಾಪತ್ತೆಯಾಗಿದ್ದರು.

ADVERTISEMENT

ಅನುಮಾನಗೊಂಡ ವೃದ್ಧೆಯ ಕುಟುಂಬದದವರು ಮನೆ ಮಾಲೀಕ ಅಂಬರೀಷ್‌ ಅವರಿಗೆ ವಿಷಯ ತಿಳಿಸಿದರು. ಆರೋಪಿ ಮಹಿಳೆ ಮೊಬೈಲ್‌ ಸ್ವಿಚ್ಡ್ ಆಫ್‌ ಆಗಿತ್ತು. ಮಾಲೀಕರು ತಮ್ಮಲ್ಲಿದ್ದ ಮತ್ತೊಂದು ಕೀ ಬಳಸಿ ಬಾಗಿಲು ತೆರೆದಾಗ ಕೃತ್ಯ ಗೊತ್ತಾಗಿದೆ.

ಮನೆಯಲ್ಲಿ ವಾಸನೆ ಆವರಿಸಿತ್ತು. ಕಪಾಟು ತೆರೆದಾಗ ಪಾರ್ವತಮ್ಮನವರ ಶವವು ಪತ್ತೆಯಾಗಿದೆ. ಅವರ ಕೈ, ಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಸಾಯಿಸಿದ ನಂತರ ಶವವನ್ನು ಕಪಾಟಿನಲ್ಲಿಟ್ಟು, ಆಭರಣಗಳೊಂದಿಗೆ ಪಾವಲ್‌ ಖಾನ್‌ ಪರಾರಿಯಾಗಿದ್ದಾಳೆ.

ಪಾವಲ್‌ ಖಾನ್‌ ಮನೆಯಲ್ಲಿ ದೊರೆತ ಆಧಾರ್‌ ಕಾರ್ಡ್‌ನಲ್ಲಿ ಬೆಂಗಳೂರಿನ ಹೊಂಗಸಂದ್ರದ ಮನೆ ವಿಳಾಸವಿದೆ. ಒಂದು ವರ್ಷದಿಂದ ಆಕೆ ವಾಸಿಸುತ್ತಿದ್ದಳು. ಏನು ಕೆಲಸ ಮಾಡುತ್ತಿದ್ದಳು ಗೊತ್ತಿಲ್ಲ ಎಂದು ಮನೆಯ ಮಾಲೀಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.