ADVERTISEMENT

ಆರಗ ಜ್ಞಾನೇಂದ್ರ ಕಚೇರಿ ಪೂಜೆ: ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘನೆ

ಅಂತರ, ಮಾಸ್ಕ್‌ ಧರಿಸುವುದನ್ನು ಮರೆತಿದ್ದ ನೂರಾರು ಜನ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 20:05 IST
Last Updated 13 ಆಗಸ್ಟ್ 2021, 20:05 IST
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಚೇರಿ ಪೂಜೆಯ ಕಾರ್ಯಕ್ರಮದಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಲೆಕ್ಕಿಸದೇ ಹಲವಾರು ಮಂದಿ ಪಾಲ್ಗೊಂಡಿದ್ದರು
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಚೇರಿ ಪೂಜೆಯ ಕಾರ್ಯಕ್ರಮದಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಲೆಕ್ಕಿಸದೇ ಹಲವಾರು ಮಂದಿ ಪಾಲ್ಗೊಂಡಿದ್ದರು   

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಕಚೇರಿಯ ಪೂಜೆ ವಿಕಾಸಸೌಧದಲ್ಲಿ ಶುಕ್ರವಾರ ನಡೆದಿದ್ದು, ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಲೆಕ್ಕಿಸದೇ ನೂರಾರು ಮಂದಿ ಪಾಲ್ಗೊಂಡಿದ್ದರು.

ಹೆಚ್ಚಿನವರು ದೈಹಿಕ ಅಂತರ, ಮಾಸ್ಕ್‌ ಧರಿಸುವುದನ್ನೇ ಮರೆತಿದ್ದರು. ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ಹಿರಿಯ ಐಪಿಎಸ್‌ ಅಧಿಕಾರಿಗಳು, ಸಿಬ್ಬಂದಿಯೂ ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಾಗರ ಪಂಚಮಿ ಹಬ್ಬದ ದಿನವಾದ ಶುಕ್ರವಾರ ಸಚಿವರ ಪೈಕಿ ಹಲವರು ತಮ್ಮ ಅಧಿಕೃತ ಕಚೇರಿಗಳ ಪೂಜೆ ನೆರವೇರಿಸಿದರು. ಆ ಪೈಕಿ ಗೃಹ ಸಚಿವರ ಕಚೇರಿ ಪೂಜೆಯ ಕಾರ್ಯಕ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ADVERTISEMENT

ಆರಗ ಜ್ಞಾನೇಂದ್ರ ಅವರು ಪ್ರತಿನಿಧಿಸುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಜನರು ಕಚೇರಿಗೆ ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅವರ ಅಭಿಮಾನಿಗಳು, ಬೆಂಬಲಿಗರೂ ಕಾರ್ಯಕ್ರಮದಲ್ಲಿದ್ದರು.

ಗೃಹ ಸಚಿವರ ಬೆಂಬಲಿಗರು ಮತ್ತು ಅಭಿಮಾನಿಗಳು ಅಂತರ ಕಾಯ್ದುಕೊಳ್ಳದೇ ಸಚಿವರೊಂದಿಗೆ ಫೋಟೊ ಸೆರೆಹಿಡಿಯುತ್ತಿದ್ದ ದೃಶ್ಯ ಕಂಡುಬಂತು. ಹಲವರು ಮಾಸ್ಕ್‌ ಧರಿಸದೇ ಗುಂಪುಗೂಡಿ ಫೋಟೊ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಆಹ್ವಾನ ನೀಡಿರಲಿಲ್ಲ: ಕಚೇರಿ ಪೂಜೆ ವೇಳೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಕಚೇರಿ ಪೂಜೆಯಲ್ಲಿ ಭಾಗವಹಿಸುವಂತೆ ನಾನು ಯಾರಿಗೂ ಆಹ್ವಾನ ನೀಡಿರಲಿಲ್ಲ’ ಎಂದರು.

‘ಪೂಜೆ ನೆರವೇರಿಸಿ ಕಚೇರಿ ಪ್ರವೇಶಿಸಿದ್ದೇನೆ. ಗೃಹ ಇಲಾಖೆ ಮಲಗದಂತೆ ನೋಡಿಕೊಳ್ಳುತ್ತೇನೆ. ಪೊಲೀಸ್‌ ಇಲಾಖೆ ಎಚ್ಚರವಾಗಿದ್ದು, ಜನರು ನೆಮ್ಮದಿಯಿಂದ ನಿದ್ರಿಸುವ ವಾತಾವರಣ ರಾಜ್ಯದಲ್ಲಿರುವಂತೆ ಕೆಲಸ ಮಾಡುತ್ತೇನೆ’ ಎಂದರು.

‘ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಅವರ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ಬಹು ಆಯಾಮಗಳಲ್ಲಿ ನಡೆಯುತ್ತಿದೆ. ಎರಡರಿಂದ ಮೂರು ದಿನಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.