
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಚ್ಚುವರಿ ಕಟ್ಟಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೇರವೇರಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಪ್ರತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ದಾಖಲೆ ನೀಡುವ ಬದಲು ಒಮ್ಮೆ ನೀಡಿದರೆ ಎಲ್ಲ ಪರೀಕ್ಷೆಗಳಿಗೆ ಅದೇ ದಾಖಲೆಗಳು ಬಳಕೆಯಾಗುವಂತೆ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಸೋಮವಾರ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹೆಚ್ಚುವರಿ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆ–ಸೆಟ್ ಪರೀಕ್ಷೆ ಅಥವಾ ಯಾವುದೇ ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ದಾಖಲೆಗಳನ್ನು ಸಲ್ಲಿಸಿದವರು ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಅರ್ಜಿ ಸಲ್ಲಿಸಿದರೆ ಸಾಕು. ಅಂಥ ತಂತ್ರಜ್ಞಾನವನ್ನು ಕೆಇಎ ಅಳವಡಿಸಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಡಿಜಿಟಲ್ ತಂತ್ರಜ್ಞಾನದ ಸದ್ಬಳಕೆ ಮತ್ತು ದುರ್ಬಳಕೆ ಎರಡೂ ಇವೆ. ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಉಂಟಾದ ಗೊಂದಲವು ಪರೀಕ್ಷಾ ವ್ಯವಸ್ಥೆಗೆ ಸವಾಲಾಗಿತ್ತು. ಕೆಇಎ ವೆಬ್‍ಕಾಸ್ಟಿಂಗ್ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ ನಡೆಸುವ ಮೂಲಕ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲಾಗಿದೆ ಎಂದರು.
ಕಳೆದ ವರ್ಷ ಸುಮಾರು 18 ಇಲಾಖೆಗಳ 6 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಯಾವುದೇ ಗೊಂದಲ ಇಲ್ಲದಂತೆ ನೇಮಕಾತಿ ಪರೀಕ್ಷೆ ನಡೆಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆ, ತಾಂತ್ರಿಕ ಶಿಕ್ಷಕ ಇಲಾಖೆಯ ಹುದ್ದೆಗಳನ್ನು ತುಂಬಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಹಾಯವಾಣಿ ಜಾಮ್ ಆಗುವುದು, ಸರ್ವರ್ ಸಮಸ್ಯೆಯಿಂದ ಫಲಿತಾಂಶ ಘೋಷಣೆ ತಡವಾಗುವುದು ಮುಂತಾದ ಸಮಸ್ಯೆ ಸರಿಪಡಿಸಲು ಪ್ರತ್ಯೇಕ ಸರ್ವರ್ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದರು.
ಸಮಾಜದಲ್ಲಿ ದಾರಿ ತಪ್ಪಿಸುವವರ ಸಂಖ್ಯೆ ದೊಡ್ಡದಿದೆ. ಅಧಿಕಾರಿಗಳು, ಸಿಬ್ಬಂದಿ ಯಾವುದೇ ಆಮಿಷಕ್ಕೆ ಒಳಗಾಗದೇ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ. ಶ್ರೀನಿವಾಸಗೌಡ, ವಿಶ್ರಾಂತ ಕುಲಪತಿ ತಿಮ್ಮೇಗೌಡ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಎಚ್, ಆಡಳಿತಾಧಿಕಾರಿ ಇಸ್ಲಾವುದ್ಧಿನ್ ಜೆ. ಗದ್ಯಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.