ADVERTISEMENT

350 ಕ್ವಿಂಟಲ್‍ ಈರುಳ್ಳಿ ಮಣ್ಣುಪಾಲು

ಬಸವರಾಜ ಅ.ನಾಡಗೌಡ
Published 16 ಮೇ 2020, 20:00 IST
Last Updated 16 ಮೇ 2020, 20:00 IST
ಹಿರೇಶಿಂಗನಗುತ್ತಿಯಲ್ಲಿ ಈರುಳ್ಳಿ ಫಸಲನ್ನು ರೋಟರ್ ಹೊಡೆದು ಮಣ್ಣಿಗೆ ಸೇರಿಸಲಾಯಿತು
ಹಿರೇಶಿಂಗನಗುತ್ತಿಯಲ್ಲಿ ಈರುಳ್ಳಿ ಫಸಲನ್ನು ರೋಟರ್ ಹೊಡೆದು ಮಣ್ಣಿಗೆ ಸೇರಿಸಲಾಯಿತು   

ಇಳಕಲ್‍ (ಬಾಗಲಕೋಟೆ ಜಿಲ್ಲೆ): ಸಮೀಪದ ಹಿರೇಶಿಂಗನಗುತ್ತಿ ಗ್ರಾಮದ ರೈತ ವೀರನಗೌಡ ಜಾರಡ್ಡಿ ಅವರು ನಾಲ್ಕು ಎಕರೆಯಲ್ಲಿ ಬೆಳೆದ ಸುಮಾರು 350 ಕ್ವಿಂಟಲ್ ಈರುಳ್ಳಿ, ದರ ಕುಸಿತದಿಂದಾಗಿ ಮಣ್ಣು ಪಾಲಾಗಿದೆ. ಫಸಲನ್ನು ಕೊಯ್ಲು ಮಾಡದೇ ಬೆಳೆ ಮೇಲೆಯೇ ಟ್ರಾಕ್ಟರ್‌ ಹೊಡೆದು ಮಣ್ಣಿಗೆ ಸೇರಿಸಿದ್ದಾರೆ.

‘ಪ್ರಜಾವಾಣಿ‘ ಜೊತೆಗೆ ತಮ್ಮ ಸಂಕಟ ಹಂಚಿಕೊಂಡ ವೀರನಗೌಡ '₹40 ಸಾವಿರ ಖರ್ಚು ಮಾಡಿದ್ದೇನೆ. ಈ ವರ್ಷ ಉತ್ತಮ
ಫಸಲು ಬಂದಿತ್ತು. ಆದರೆ ಮಾರುಕಟ್ಟೆಯಿಲ್ಲ. ಈರುಳ್ಳಿ ಕಿತ್ತು, ಕೊಯ್ದು, ಸಾಗಾಟ ಮಾಡಿದರೆ ಖರ್ಚು ಮಾಡಿದ ದುಡ್ಡೂ ಸಿಗುವುದಿಲ್ಲ. ಹಾಗಾಗಿ, ಮಣ್ಣಿಗೆ ಸೇರಿಸಿಬಿಟ್ಟೆ' ಎಂದು ನಿಟ್ಟುಸಿರು ಬಿಟ್ಟರು.

'ಕಳೆದ ವರ್ಷ ಉತ್ತಮ ಲಾಭ ಬಂದಿತ್ತು. ಅದೇ ಉಮೇದಿನಲ್ಲಿ ಈ ವರ್ಷ ಮತ್ತೆ ಬೆಳೆದಿದ್ದೆ. ಈಗ ಕಷ್ಟವಾಗಿದೆ. ಸರ್ಕಾರ ಪರಿಹಾರ ನೀಡದಿದ್ದರೆ ಮುಂಗಾರುಹಂಗಾಮಿಗೆ ಬೀಜ, ಗೊಬ್ಬರ ಖರೀದಿಸಲು ಸಾಲ ಮಾಡಬೇಕಾಗುತ್ತದೆ' ಎಂದರು.

ADVERTISEMENT

‘ಬೆಳೆದ ಫಸಲಿಗೆ ನಿಶ್ಚಿತ ದರವಿಲ್ಲದಿದ್ದರೆ ಯಾವುದೇ ಯೋಜನೆಯಿಂದ ರೈತರಿಗೆ ಲಾಭವಾಗದು. ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು' ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.