ADVERTISEMENT

ಆನ್‌ಲೈನ್‌ ಶಿಕ್ಷಣದಿಂದ ಕಲಿಕೆ ಕುಂಠಿತ: ಅಧ್ಯಯನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 20:16 IST
Last Updated 27 ನವೆಂಬರ್ 2020, 20:16 IST

ಬೆಂಗಳೂರು: ಶಾಲೆ ಆರಂಭಗೊಳ್ಳುವುದು ವಿಳಂಬವಾಗುತ್ತಿರುವುದು ಮತ್ತು ಈ ಸಂಬಂಧ ಉಂಟಾಗುತ್ತಿರುವ ಗೊಂದಲಗಳು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ.

ನಗರದ ಬ್ರೇನ್‌ ಸಂಸ್ಥೆಯು ಕರ್ನಾಟಕದ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ಜೊತೆಗೂಡಿ ಈ ಕುರಿತು ಅಧ್ಯಯನ ನಡೆಸಿದೆ. ಭೌತಿಕ ತರಗತಿಗಳು ನಡೆಯದೇ ಇರುವುದು ಮುಖ್ಯವಾಗಿ ಐದನೇ ತರಗತಿಯವರೆಗಿನ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

‘ತರಗತಿಗಳು ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು ಪಾಠಗಳನ್ನು ಪುನರ್‌ಮನನ ಮಾಡಿಕೊಳ್ಳಲು ಆಗುತ್ತಿಲ್ಲ. ಕಲಿಕೆಯ ಮೇಲೆ ಆಸಕ್ತಿಯನ್ನೂ ಕಳೆದುಕೊಳ್ಳುತ್ತಿದ್ದಾರೆ’ ಎಂದು ಅಧ್ಯಯನ ಹೇಳಿದೆ.

ADVERTISEMENT

‘ದಿ ಬ್ರೈನ್‌ ಸೆಂಟರ್’ ಶಿಕ್ಷಕರು, ಪೋಷಕರು ಮತ್ತು ಮಕ್ಕಳನ್ನು ಮಾತನಾಡಿಸಿ ಈ ಅಧ್ಯಯನ ವರದಿ ಸಿದ್ಧಗೊಳಿಸಿದೆ. ಈ ಪೈಕಿ ಶೇ 80ರಷ್ಟು ಮಂದಿ ಆನ್‌ಲೈನ್‌ ಶಿಕ್ಷಣ ಪರಿಣಾಮಕಾರಿ ಅಲ್ಲ ಎಂದು ಹೇಳಿದ್ದಾರೆ.

‘ಆನ್‌ಲೈನ್‌ ಶಿಕ್ಷಣದಲ್ಲಿ ಕಲಿಕೆ, ಸ್ಮರಣೆ, ಪುನರ್‌ಮನನಕ್ಕೆ ಹೆಚ್ಚು ಒತ್ತು ಸಿಗುವುದಿಲ್ಲ. ಕಲಿಕೆ ನಿರಂತರ ಪ್ರಕ್ರಿಯೆ ಆಗಿರುವುದರಿಂದ ಸತತ ಅಭ್ಯಾಸ ಅವಶ್ಯವಾಗಿರುತ್ತದೆ’ ಎಂದು ಕ್ಯಾಮ್ಸ್‌ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳುತ್ತಾರೆ.

‘ಪೋಷಕರು ಒತ್ತಡ ಹೇರುತ್ತಾರೆ ಎಂಬ ಕಾರಣದಿಂದ ಮಾತ್ರ ಕೆಲವು ಮಕ್ಕಳು ಆನ್‌ಲೈನ್‌ ತರಗತಿಗೆ ಹಾಜರಾಗುತ್ತಾರೆ. ಆದರೆ, ಬಹುತೇಕ ಮಕ್ಕಳಿಗೆ ಆನ್‌ಲೈನ್‌ ತರಗತಿ ಕೇಳುವ ಆಸಕ್ತಿ ಇಲ್ಲ. ಆಸಕ್ತಿ ಕಡಿಮೆಯಾದಾಗ ಕಲಿಕೆ ಸಹಜವಾಗಿ ಕುಂಠಿತಗೊಳ್ಳುತ್ತದೆ’ ಎಂದು ಅವರು ಹೇಳುತ್ತಾರೆ.

‘ಕಲಿಕೆಯ ಮೇಲೆ ಒಮ್ಮೆ ಮಕ್ಕಳು ಆಸಕ್ತಿ ಕಳೆದುಕೊಂಡರೆ ಮತ್ತೆ ಅವರಲ್ಲಿ ಮೊದಲಿನ ಉತ್ಸಾಹ ಮೂಡಿಸುವುದು ಕಷ್ಟವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕರಿಗೂ ಇದು ದೊಡ್ಡ ಸವಾಲಾಗಿ ಪರಿಣಮಿಸಲಿದೆ’ ಎಂದು ಉಲ್ಲಾಳುವಿನಲ್ಲಿರುವ ಆಕ್ಸ್‌ಫರ್ಡ್‌ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಸುಪ್ರೀತ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.