ADVERTISEMENT

ರೇಷ್ಮೆ ಮಾರುಕಟ್ಟೆಯಲ್ಲಿ ಇನ್ನು ಆನ್‌ಲೈನ್‌ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 19:00 IST
Last Updated 21 ಜನವರಿ 2021, 19:00 IST

ಬೆಂಗಳೂರು: ರಾಜ್ಯ ಎಲ್ಲ ರೇಷ್ಮೆ ಮಾರುಕಟ್ಟೆಗಳಲ್ಲಿ ನಗದು ವ್ಯವಹಾರದ ಬದಲು, ಆನ್‌ಲೈನ್‌ ವ್ಯವಹಾರ ಆರಂಭವಾಗಿದೆ. ಬಹಿರಂಗವಾಗಿ ನಡೆಯುತ್ತಿದ್ದ ರೇಷ್ಮೆ ಗೂಡು ಹರಾಜು ಪ್ರಕ್ರಿಯೆ ಇನ್ನು ಮುಂದೆ ಮೊಬೈಲ್ ಆಪ್ ಮೂಲಕ ನಡೆಯಲಿದೆ.

ರೇಷ್ಮೆ ಸಚಿವರಾಗಿದ್ದ ಕೆ.ಸಿ. ನಾರಾಯಣ ಗೌಡ, 15 ದಿನಗಳ ಒಳಗೆ ರೇಷ್ಮೆ ಮಾರುಕಟ್ಟೆಯಲ್ಲಿ ಇ– ಹಣ ಪಾವತಿ ಪ್ರಕ್ರಿಯೆ ಆರಂಭಿಸುವಂತೆಜ. 4ರಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಗಡುವು ನೀಡಿದ್ದರು. ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳು ಇ– ಹಣ ಪಾವತಿಗೆ ಆಸಕ್ತಿ ಹೊಂದಿದ್ದರೂ ಈ ಪ್ರಕ್ರಿಯೆ ಆರಂಭವಾಗಿಲ್ಲ ಎಂದೂ ತರಾಟೆಗೆ ತೆಗೆದುಕೊಂಡಿದ್ದರು.

ಹೀಗಾಗಿ, ಪ್ರಾಯೋಗಿಕವಾಗಿ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ಇ–ಟೆಂಡರ್ ಹಾಗೂ ಇ–ಹಣ ಪಾವತಿ ಆರಂಭಿಸಲಾಗಿತ್ತು. ಅಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು, ರೈತರು, ರೀಲರ್‌ಗಳು ಸುಗಮವಾಗಿ ವ್ಯವಹಾರ ನಡೆಸಿದ್ದಾರೆ. ಇದೀಗ ಎಲ್ಲ ರೇಷ್ಮೆ ಮಾರುಕಟ್ಟೆಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ರೇಷ್ಮೆ ಗೂಡು ಖರೀದಿಸಿದ ರೀಲರ್‌ಗಳು ಮಾರುಕಟ್ಟೆ ಅಧಿಕಾರಿಯ ಖಾತೆಗೆ ಹಣ ಜಮೆ ಮಾಡುತ್ತಾರೆ. ಆ ಅಧಿಕಾರಿಯ ಖಾತೆಯಿಂದ ಬೆಳೆಗಾರರ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ.

ADVERTISEMENT

‘ಸಚಿವರ ಸೂಚನೆಯಂತೆ ಎಲ್ಲ ಅಧಿಕಾರಿಗಳು ರೇಷ್ಮೆ ಮಾರುಕಟ್ಟೆಗಳಿಗೆ ಭೇಟಿ ನೀಡಿ, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಟೆಂಡರ್ ಹಾಗೂ ಖರೀದಿಗೆ ಇ –ಹಣ ಪಾವತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಎಲ್ಲ ಮಾರುಕಟ್ಟೆಗಳಿಗೆ ಇ–ಬ್ಯಾಂಕಿಂಗ್ ವ್ಯವಸ್ಥೆ ವಿಸ್ತರಿಸಲಾಗಿದೆ. ಬೆಳೆಗಾರರಿಗೆ ಮಾಹಿತಿ ನೀಡಲು ಮಾರುಕಟ್ಟೆಗಳಲ್ಲಿ ಕರಪತ್ರಗಳು, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸುಮಾರು 1.31 ಲಕ್ಷ ರೇಷ್ಮೆ ಬೆಳೆಗಾರರು, 7 ಸಾವಿರ ರೀಲರ್‌ಗಳು ರೇಷ್ಮೆ ಉದ್ಯಮದಲ್ಲಿದ್ದಾರೆ. ರೀಲರ್‌ಗಳು ನಗದು ಠೇವಣಿ ಇಡಬೇಕಾಗಿಲ್ಲ. ಕಂಪ್ಯೂಟರ್‌ನಲ್ಲಿ ಎಲ್ಲ ವ್ಯವಹಾರಗಳ ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ. ವ್ಯವಹಾರ ಪ್ರಕ್ರಿಯೆ ಕೂಡ ವೇಗವಾಗಿ ಆಗಲಿದೆ. ಪ್ರತಿದಿನ ಸುಮಾರು 150 ಟನ್ ರೇಷ್ಮೆ ಗೂಡಿನ ವಹಿವಾಟು ನಡೆಯುತ್ತಿದೆ. ವಾರ್ಷಿಕವಾಗಿ ಸುಮಾರು ₹ 3,500 ಕೋಟಿ ವಹಿವಾಟು ನಡೆಯುತ್ತಿದೆ’ ಎಂದರು.

‘ಪ್ರತಿ ಮಾರುಕಟ್ಟೆಯಲ್ಲೂ ವ್ಯವಹಾರ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ದಿಢೀರ್‌ ಪರಿಶೀಲನೆಗೆ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ವಿಚಕ್ಷಣಾ ದಳ ರಚಿಸಲಾಗಿದೆ. ರೈತರು, ರೀಲರ್‌ಗಳು ದೂರು ನೀಡಿದರೆ ವಿಚಕ್ಷಣಾ ದಳ ಕ್ರಮ ತೆಗೆದುಕೊಳ್ಳಲಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.