ಬೆಂಗಳೂರು: ‘ರಾಜ್ಯದಲ್ಲಿ ಎಲ್ಲ ಜನೌಷಧ ಕೇಂದ್ರಗಳನ್ನ ಸ್ಥಗಿತಗೊಳಿಸಿಲ್ಲ. 1,400 ಜನೌಷಧ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನು ಮಾತ್ರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಮಾಡುವುದು ಸರಿಯಲ್ಲ. ಜನೌಷಧ ಕೇಂದ್ರಗಳ ಸ್ಥಗಿತದ ಹಿಂದೆ ರಾಜಕೀಯ ಉದ್ದೇಶವಿಲ್ಲ. ಸರ್ಕಾರವೇ ಉಚಿತವಾಗಿ ಔಷಧಗಳನ್ನ ನೀಡುವಾಗ, ಆಸ್ಪತ್ರೆಗಳಲ್ಲಿ ಔಷಧಗಳನ್ನು ಮಾರಾಟ ಮಾಡುವ ಮಳಿಗೆಗಳು ಏಕೆ ಬೇಕು? ಜನೌಷಧ ಕೇಂದ್ರಗಳ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಬೆರೆಸುವುದು ಸರಿಯಲ್ಲ’ ಎಂದರು.
‘ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳ ಹೊರತಾಗಿ, ರಾಜ್ಯದಲ್ಲಿ ಇನ್ನೂ 1,220 ಜನೌಷಧ ಕೇಂದ್ರಗಳಿವೆ. ಅಲ್ಲದೇ, ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲ ಜನೌಷಧ ಕೇಂದ್ರಗಳನ್ನ ಮುಚ್ಚಿಸುವಂತೆ ಸೂಚಿಸಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆಸ್ಪತ್ರೆಗಳ ಆವರಣದಲ್ಲಿರುವ ಹಾಲಿ ಕೇಂದ್ರಗಳು ಇಲಾಖೆಯ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನ ಪರಿಶೀಲಿಸಿ, ಕ್ರಮ ಜರುಗಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.
‘ಹಲವು ಜನೌಷಧ ಕೇಂದ್ರಗಳ ಜತೆಗಿನ ಒಪ್ಪಂದಗಳು ನವೀಕರಣವಾಗಿಲ್ಲ. ಇನ್ನು ಕೆಲವು ಕೇಂದ್ರಗಳು ಇತ್ತೀಚೆಗೆ ಆರಂಭವಾಗಿದ್ದು, ಅವರು ಹೆಚ್ಚಿನ ಬಂಡವಾಳ ಹೂಡಿರುತ್ತಾರೆ. ಅವರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಅವರ ಒಪ್ಪಂದದ ಅವಧಿ ಮುಗಿದ ಬಳಿಕವೇ ಸ್ಥಗಿತಗೊಳಿಸುವ ಕುರಿತು ಆಲೋಚಿಸಲಾಗಿದೆ’ ಎಂದರು.
‘ಜನೌಷಧ ಕೇಂದ್ರಗಳಲ್ಲಿ ಜೆನರಿಕ್ ಔಷಧಗಳನ್ನು ಮಾತ್ರ ಮಾರಾಟ ಮಾಡಬೇಕು. ಆದರೆ, ಹಲವು ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಗಳನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿಯವರು ಪರಿಶೀಲನೆ ನಡೆಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.