ADVERTISEMENT

ಖರ್ಗೆ ಸಭೆಗೆ ಬಂದಿದ್ದು ಒಬ್ಬ ಸದಸ್ಯ!

ಕಲಬುರ್ಗಿಗೆ ಎರಡು ದಿನ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಭೇಟಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 20:04 IST
Last Updated 27 ನವೆಂಬರ್ 2018, 20:04 IST
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸದಸ್ಯ ಜನಾರ್ದನ ಸಿಂಗ್‌ ಅವರು ಮಂಗಳವಾರ ಕಲಬುರ್ಗಿಯ ಇಎಸ್‌ಐಸಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸದಸ್ಯ ಜನಾರ್ದನ ಸಿಂಗ್‌ ಅವರು ಮಂಗಳವಾರ ಕಲಬುರ್ಗಿಯ ಇಎಸ್‌ಐಸಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು   

ಕಲಬುರ್ಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಯನ ಪ್ರವಾಸ ಮತ್ತು ಸಭೆ ನಗರದಲ್ಲಿ ಮಂಗಳವಾರದಿಂದ ಆರಂಭಗೊಂಡಿತು. ಆದರೆ, ಈ ಸಭೆಯಲ್ಲಿ ಒಬ್ಬ ಸದಸ್ಯ ಮಾತ್ರ ಪಾಲ್ಗೊಂಡಿದ್ದಾರೆ!

ಲೋಕಸಭೆಯ 15 ಹಾಗೂ ರಾಜ್ಯಸಭೆಯ ಏಳು ಹೀಗೆ 22 ಜನ ಸಂಸದರು ಈ ಸಮಿತಿಯ ಸದಸ್ಯರಾಗಿದ್ದಾರೆ. ಅಧ್ಯಕ್ಷ ಖರ್ಗೆ ಮತ್ತು ಸಮಿತಿ ಸದಸ್ಯರಾಗಿರುವ ಬಿಹಾರದ ಬಿಜೆಪಿ ಸಂಸದ ಜನಾರ್ದನ ಸಿಂಗ್‌ ಇಬ್ಬರೇ ಪಾಲ್ಗೊಂಡಿದ್ದಾರೆ.

ಈ ಸಮಿತಿಯ ಸದಸ್ಯರಾಗಿರುವ ಹಾವೇರಿ ಸಂಸದ ಶಿವಕುಮಾರ ಉದಾಸಿಸಹ ಬಂದಿಲ್ಲ.

ADVERTISEMENT

ಸಮಿತಿಯ ಅಧ್ಯಯನ ಪ್ರವಾಸ ಹಾಗೂ ಸಭೆಯ ವ್ಯವಸ್ಥೆಗೆ ಕೆನರಾ ಬ್ಯಾಂಕ್‌ನ್ನು ನೋಡಲ್‌ ಏಜೆನ್ಸಿಯನ್ನಾಗಿ ನೇಮಿಸಲಾಗಿತ್ತು. ಅವರು ಸಮಿತಿಯ ಎಲ್ಲ 22 ಜನ ಸದಸ್ಯರು ಹಾಗೂ ಐವರು ಅಧಿಕಾರಿಗಳಿಗೆ ನಗರದ ತಾರಾ ಹೋಟೆಲ್‌ಗಳಲ್ಲಿ, ಸರ್ಕಾರಿ ಹಾಗೂ ವಿಶ್ವವಿದ್ಯಾಲಯಗಳ ಅತಿಥಿಗೃಹಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದರು. ಸಭೆ ನಡೆಸಲು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ಸಭಾಂಗಣವನ್ನೂ ಕಾಯ್ದಿರಿಸಲಾಗಿತ್ತು.

ಒಂದು ವಾರದಿಂದ ಜಿಲ್ಲಾ ಆಡಳಿತವೂ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಇಷ್ಟೇ ಅಲ್ಲದೆ ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಕರೆದಿದ್ದ ಸಭೆಯಿಂದ ವಿನಾಯಿತಿ ಪಡೆದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರೂ ಇಲ್ಲಿಯೇ ಇದ್ದು ಸಿದ್ಧತೆಯ ನೇತೃತ್ವ ವಹಿಸಿದ್ದರು. ಪೊಲೀಸ್‌ ಇಲಾಖೆ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿತ್ತು.

ಎಲ್ಲ ಸದಸ್ಯರು ಹೈದರಾಬಾದ್‌ಗೆ ಬಂದು ಅಲ್ಲಿಂದ ಕಲಬುರ್ಗಿಗೆ ರಸ್ತೆ ಮೂಲಕ ಬರುವುದು ನಿಗದಿಯಾಗಿತ್ತು. ಸಮಿತಿಯ ಸದಸ್ಯರನ್ನು ಕರೆತರಲು ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್‌ಗೆ ತೆರಳಿದ್ದರು.

ಕೋರಂ ಅಗತ್ಯವಿಲ್ಲ: ‘ಇದು ಅಧ್ಯಯನ ಪ್ರವಾಸ. ಅಧ್ಯಯನ ಪ್ರವಾಸ ಕೈಗೊಂಡಾಗ ಅಲ್ಲಿ ನಡೆಸುವ ಸಭೆಗಳಿಗೆ ಕೋರಂನ ಅಗತ್ಯವಿಲ್ಲ’ ಎಂಬುದು ಮೂಲಗಳ ಸ್ಪಷ್ಟನೆ.

ಭೇಟಿ: ಈ ಸಮಿತಿಯು ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆ ಮತ್ತು ಗುಲಬರ್ಗಾ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ಎಚ್‌ಕೆಆರ್‌ಡಿಬಿ ಸಭಾಂಗಣದಲ್ಲಿ ಸಭೆ ನಡೆಸಿತು. ಸಮಿತಿ ನ.28 ರಂದು ಕಲಬುರ್ಗಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲಿದೆ.

‘ಹಣಕಾಸು ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದೆ’

‘ನಾನೂ ಸೇರಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿರುವ ನಾಲ್ವರು ಸಂಸದರು ಸಂಸತ್ತಿನ ಹಣಕಾಸು ಸಮಿತಿಯ ಸದಸ್ಯರೂ ಆಗಿದ್ದೇವೆ. ದೆಹಲಿಯಲ್ಲಿ ಮಂಗಳವಾರ ನಡೆದ ಹಣಕಾಸು ಸಮಿತಿಯ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿ ಕಲಬುರ್ಗಿಗೆ ಬರಲಾಗಲಿಲ್ಲ’ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.