ADVERTISEMENT

ಕೊರೊನಾ ಲಕ್ಷಣ ಇರುವವರಿಗೆ ಮಾತ್ರ ತಪಾಸಣೆ– ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 6:39 IST
Last Updated 22 ಜನವರಿ 2022, 6:39 IST
ಡಾ. ಕೆ ಸುಧಾಕರ್
ಡಾ. ಕೆ ಸುಧಾಕರ್   

ಬೆಂಗಳೂರು: ‘ಕೋವಿಡ್ ಮೂರನೇ ಅಲೆ ಇನ್ನು ಎರಡರಿಂದ ಮೂರು ವಾರಗಳಲ್ಲಿ ತೀವ್ರತೆ ಕಳೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಸಚಿವರು, ‘ಐಸಿಎಂಆರ್‌ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಕೊರೊನಾ ಲಕ್ಷಣ ಇರುವವರಿಗೆ ಮಾತ್ರ ತಪಾಸಣೆ ನಡೆಸಲಾಗುವುದು. ಕೊರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುವುದು ಗಣನೀಯವಾಗಿ ಹೆಚ್ಚಿದರೆ ಬೇರೆ ದಾರಿ ಇಲ್ಲದೆ ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತೆ ಜಾರಿ ಮಾಡಲಾಗುವುದು’ ಎಂದರು.

‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಆಗಿರುವುದು ಸಮಾಧಾನ ತಂದಿದೆ. ವೈಜ್ಞಾನಿಕವಾಗಿ ಪರಾಮರ್ಶಿಸಿ, ತಜ್ಞರ ಅಭಿಪ್ರಾಯ ಪಡೆದು ವಾರಾಂತ್ಯ ಕರ್ಫ್ಯೂ ರದ್ದು ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಜನರು ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರಿತು ನಡೆಯಬೇಕು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಹಾಗೂ ಅಂತರವನ್ನು ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಜೊತೆ ಮೂರು ಗಂಟೆಗಳ ಸುದೀರ್ಘ ಸಭೆಯಲ್ಲಿ ರಚನಾತ್ಮಕ ಸಲಹೆಗಳನ್ನು ತೆಗೆದುಕೊಂಡು ವೈಜ್ಞಾನಿಕ ಆಧಾರದಲ್ಲಿ ಸರ್ಕಾರ ನಿರ್ಧಾರ ಮಾಡಿದೆ. ಜನರು ಅನಗತ್ಯವಾಗಿ ಗುಂಪು ಸೇರುವುದನ್ನು ಕಡಿಮೆ ಮಾಡಬೇಕು. ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ’ ಎಂದು ಸಚಿವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.