ADVERTISEMENT

15 ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ; ಕೃಷ್ಣ ಬೈರೇಗೌಡ ಆರೋಪ

₹10 ಕೋಟಿಯಿಂದ ₹25 ಕೋಟಿವರೆಗೆ ಖರೀದಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
ಕಲಾಪದ ವೇಳೆ ಸಚಿವ ಕೃಷ್ಣಬೈರೇ ಗೌಡ ದಾಖಲೆ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ-
ಕಲಾಪದ ವೇಳೆ ಸಚಿವ ಕೃಷ್ಣಬೈರೇ ಗೌಡ ದಾಖಲೆ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ-   

ಬೆಂಗಳೂರು: ‘ಯಾವುದೇ ಅಂಜಿಕೆ ಇಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಮ್ಮ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಕೊಡುತ್ತೇವೆ. ಜತೆಗೆ ₹10 ಕೋಟಿಯನ್ನೂ ನೀಡುತ್ತೇವೆ. ಉಪಚುನಾವಣೆಯೇ ನಡೆಯದಂತೆ ನೋಡಿಕೊಳ್ಳುತ್ತೇವೆ’.

ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ ಶಾಸಕರು ಹಾಗೂ ಬಿಜೆಪಿ ನಾಯಕರ ನಡುವಿನ ಸಂಭಾಷಣೆಗಳ ವಿವರಗಳನ್ನು ದಾಖಲೆ ಸಮೇತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಬಿಚ್ಚಿಟ್ಟಿದ್ದು ಹೀಗೆ. 15 ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಇದೆ ಎಂದೂ ಆರೋಪಿಸಿದರು.

‘ಸದನದಲ್ಲಿ ಇಲ್ಲದ ಶಾಸಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಜತೆಗೆ, ನೋಟಿಸ್‌ ನೀಡಿ ವಿಷಯವನ್ನು ಪ್ರಸ್ತಾಪಿ
ಸಬೇಕು’ ಎಂದು ಬಿಜೆಪಿಯ ಜಗದೀಶ ಶೆಟ್ಟರ್‌ ಆಕ್ಷೇಪಿಸಿದರು.

ADVERTISEMENT

ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ‘ಶಾಸಕರನ್ನು ಜನರು ಆಯ್ಕೆ ಮಾಡಿರುವುದೇ ಸದನಕ್ಕೆ ಬರಲು. ಗೈರುಹಾಜರಿ ಬಗ್ಗೆ ಶಾಸಕರು ಅನುಮತಿ ಪಡೆದಿಲ್ಲ. ಅವರು ಸದನಕ್ಕೆ ಬಾರದೆ ಇರುವ ಬಗ್ಗೆ ನಾನು ಜವಾಬ್ದಾರನಲ್ಲ. ಕೃಷ್ಣ ಬೈರೇಗೌಡರು ದಾಖಲೆ ಸಮೇತ ವಿಷಯ ಪ್ರಸ್ತಾಪಿಸುವುದಕ್ಕೆ ಅಡ್ಡಿ ಇಲ್ಲ. ದಾಖಲೆ ಇದ್ದರೆ ನೀವು ವಿಷಯಗಳನ್ನು ಪ್ರಸ್ತಾಪಿಸಿ. ಎಲ್ಲ ವಿಷಯ ಬಹಿರಂಗವಾಗಲಿ. ಜನರು ನೋಡಿ ತೀರ್ಮಾನಿಸಲಿ’ ಎಂದರು.

ಬಳಿಕ ಮಾತು ಮುಂದುವರಿಸಿದ ಕೃಷ್ಣ ಬೈರೇಗೌಡ, ‘ರಮೇಶ ಜಾರಕಿಹೊಳಿ ಅವರು ಎಂಟು ತಿಂಗಳಿಂದ ಬಿಜೆಪಿಯವರ ಜತೆಗೆ ಸಂಪರ್ಕದಲ್ಲಿದ್ದಾರೆ. ಅವರು ನವೆಂಬರ್‌, ಜನವರಿ ಹಾಗೂ ಫೆಬ್ರುವರಿಯಲ್ಲಿ ಮುಂಬೈಯಲ್ಲಿ ಮೊಕ್ಕಾಂ ಹೂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದರು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಈ ಹಿಂದೆಯೇ ಮನವಿ ಸಲ್ಲಿಸಿದ್ದೇವೆ’ ಎಂದರು.

‘ಶಾಸಕರ ರಾಜೀನಾಮೆಗೂ ನಮಗೂ ಸಂಬಂಧ ಇಲ್ಲ ಎಂದು ಕೆಲವು ಬಿಜೆಪಿ ನಾಯಕರು ಹೇಳುತ್ತಾರೆ. ಇನ್ನೊಂದೆಡೆ, ನಮ್ಮ ಶಾಸಕರ ಜತೆಗೆ ಸಂಭಾಷಣೆ ನಡೆಸುತ್ತಾರೆ. ಇದು ಕಲ್ಪನೆಯಾ. ಇದೆಲ್ಲ ನೈತಿಕ ಮಾರ್ಗವೇ, ಇದು ಆಪರೇಷನ್‌ ಕಮಲ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ಶಾಸಕರು ಹೇಳಿಕೊಂಡಿದ್ದಾರೆ. 8–9 ಜನರು ಒಂದು ಕಡೆ ಸೇರುವುದು, 15–17 ಶಾಸಕರು ಗುಂಪಾಗಿ ಸೇರುವುದು ಸ್ವಯಂಪ್ರೇರಣೆಯೇ’ ಎಂದೂ ಅವರು ಆಕ್ರೋಶದಿಂದ ಕೇಳಿದರು.

‘2009ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಆಪರೇಷನ್‌ ಕಮಲ ನಡೆಸಿದ್ದರು. ಆಗ ಜಗ್ಗೇಶ್‌, ವಿ.ಸೋಮಣ್ಣ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡಿದ್ದರು’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ವಿ.ಸೋಮಣ್ಣ ಆಕ್ಷೇಪಿಸಿ, ‘ನಾನು ಆಮಿಷಕ್ಕೆ ಬಲಿಯಾಗಿಲ್ಲ. ರಾಜೀನಾಮೆ ನೀಡಿ ಇಷ್ಟವಾದ ಪಕ್ಷಕ್ಕೆ ಸೇರುವುದು ನಮ್ಮ ಹಕ್ಕು. ಕಾಂಗ್ರೆಸ್‌ನಲ್ಲಿ ಸಮಸ್ಯೆಯಾಗಿದ್ದರಿಂದ ರಾಜೀನಾಮೆ ಕೊಟ್ಟು ಬಂದೆ. ಸಿದ್ದರಾಮಯ್ಯ ಪಕ್ಷಾಂತರ ಮಾಡಿಲ್ಲವೇ. ನೀವು ಮಾಡಿದ್ದು ಪಕ್ಷಾಂತರ ಅಲ್ಲವೇ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.