ADVERTISEMENT

ಸುಧಾಕರ್‌ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ: ಕಲಾಪ ಅನಿರ್ದಿಷ್ಟ ಕಾಲ ಮುಂದೂಡಿಕೆ

ಸಚಿವರ ಹೇಳಿಕೆಗೆ ವಿಧಾನಸಭೆಯಲ್ಲಿ ಭಾರೀ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 12:46 IST
Last Updated 24 ಮಾರ್ಚ್ 2021, 12:46 IST
ಸಾಂಕೇತಿಕ ಚಿತ್ರ(ವಿಧಾನಸಭೆ)
ಸಾಂಕೇತಿಕ ಚಿತ್ರ(ವಿಧಾನಸಭೆ)   

ಬೆಂಗಳೂರು: ರಾಜ್ಯದ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿದರು.

ಭೋಜನ ವಿರಾಮದ ಬಳಿಕ ಕಲಾಪ ಸೇರಿದಾಗ ಸುಧಾಕರ್‌ ಹೇಳಿಕೆಯನ್ನು ವಿಪಕ್ಷ ಸದಸ್ಯರು ಕಟುವಾಗಿ ಟೀಕಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಸಿದ್ದರಾಮಯ್ಯ ಮಾತನಾಡಿ, ‘ಸುಧಾಕರ್‌ ಅವರು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ನನ್ನ, ಕೆ.ಆರ್‌.ರಮೇಶ್‌ಕುಮಾರ್‌, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. 224 ಶಾಸಕರು ಸತ್ಯ ಹರಿಶ್ಚಂದ್ರರಲ್ಲ ಎಂದಿದ್ದಾರೆ. ಇದು ಹಕ್ಕುಚ್ಯುತಿಯಾಗುತ್ತದೆ. ಎಲ್ಲಾ ಶಾಸಕರ ಬಗ್ಗೆಯೂ ತನಿಖೆ ಮಾಡಿಸಿ’ ಎಂದು ಗುಡುಗಿದರು.

ADVERTISEMENT

‘ಮುಖ್ಯಮಂತ್ರಿ ಸೇರಿ ಎಲ್ಲ ಶಾಸಕರ ಬಗ್ಗೆಯೂ ತನಿಖೆ ನಡೆಯಲಿ. ಈ ರೀತಿ ಹೇಳಿಕೆ ನೀಡಿದ ಸುಧಾಕರ್‌ ಅವರು ರಾಜೀನಾಮೆ ನೀಡಬೇಕು. ಇವರ ಪ್ರಕಾರ 224 ಶಾಸಕರೂ ವ್ಯಭಿಚಾರಿಗಳಾ? ಮಂತ್ರಿಗಳನ್ನು ನೀವೇಕೆ ಸಮರ್ಥಿಸಿಕೊಳ್ಳುತ್ತೀರಿ’ ಎಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ವಿರುದ್ಧ ಗರಂ ಆದ ಸಿದ್ದರಾಮಯ್ಯ, ’ಇದು ವ್ಯಭಿಚಾರಿಗಳ ಸರ್ಕಾರ’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಮಾತನಾಡಿ, ‘ನಾನು 32 ಕ್ಕೂ ಹೆಚ್ಚು ವರ್ಷಗಳಿಂದ ಸದನದಲ್ಲಿದ್ದೇನೆ. ಹಿಂದೆಂದೂ ಯಾರೂ ಈ ರೀತಿ ಮಾತನಾಡಿರಲಿಲ್ಲ. ಇದರಿಂದ ನನಗೆ ನೋವಾಗಿದೆ. ಎಲ್ಲರ ಬಗ್ಗೆಯೂ ತನಿಖೆ ಆಗಲಿ. ಈ ಸದನದಲ್ಲಿ ಮಹಿಳೆಯರೂ ಇದ್ದಾರೆ. ಸಚಿವರು ಇಂತಹ ಮಾತುಗಳನ್ನು ಆಡಿದ್ದು ಸರಿಯಲ್ಲ’ ಎಂದರು.

ಸಚಿವ ಸುಧಾಕರ್‌ ಅವರು ಸದಸ್ಯರ ಕ್ಷಮೆಯನ್ನು ಕೇಳಬೇಕು ಎಂದು ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್‌ ಆಗ್ರಹಿಸಿದರು.

ಸಚಿವ ಸುಧಾಕರ್ ಅವರನ್ನು ಸಮರ್ಥಿಸಿ ಮಾತನಾಡಿದ ಬೊಮ್ಮಾಯಿ, ‘ಸಚಿವರು ಸದನದಿಂದ ಹೊರಗೆ ಮಾಧ್ಯಮದ ಬಳಿ ಮಾತನಾಡಿದ್ದಾರೆ. ಅವರು ಯಾವ ಅರ್ಥದಲ್ಲಿ ಏನು ಮತ್ತು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಸದನದಲ್ಲಿ ಸಚಿವರ ಚಾರಿತ್ರ್ಯಕ್ಕೆ ಧಕ್ಕೆ ಬರುವಂತೆ ನೀವು ಮಾತನಾಡಲಿಲ್ಲವೇ’ ಎಂದು ಪ್ರಶ್ನಿಸಿದರು.

ಗದ್ದಲ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಯಾರೂ ಭಾವಾವೇಶಕ್ಕೆ ಒಳಗಾಗಿ ಸದಸ್ಯರ ಬಗ್ಗೆ, ಸದನದ ಗೌರವಕ್ಕೆ ಧಕ್ಕೆ ತರುವ ಹಾಗೆ ಮಾತನಾಡಬಾರದು. ಎಲ್ಲರೂ ಸದನಕ್ಕೆ ಮತ್ತು ಸದಸ್ಯರಿಗೆ ಗೌರವ ತರುವ ರೀತಿಯಲ್ಲೇ ಮಾತನಾಡಬೇಕು. ನಿಮ್ಮೆಲ್ಲರಿಗೂ ಆದ ನೋವು ನನಗೂ ಆಗಿದೆ’ ಎಂದು ಸಮಾಧಾನಪಡಿಸುವ ಮಾತು ಆಡಿದರು.

ಕಲಾಪ ಅನಿರ್ಧಿಷ್ಟ ಮುಂದಕ್ಕೆ

ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷ ಕಾಗೇರಿ ಅನಿರ್ಧಿಷ್ಟ ಕಾಲ ಮುಂದೂಡಿದರು. ‘ಬಜೆಟ್‌ ಅಧಿವೇಶನ ಒಟ್ಟು 13 ದಿನಗಳು ನಡೆದಿದ್ದು, 44 ಗಂಟೆ 30 ನಿಮಿಷ ಕಲಾಪ ನಡೆದಿದೆ. 11 ಮಸೂದೆಗಳ ಪೈಕಿ 9 ಮಸೂದೆಗಳು ಅಂಗೀಕಾರ ಪಡೆದಿವೆ’ ಎಂದು ಕಾಗೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.