ADVERTISEMENT

#AnswerMadiModi: ಕನ್ನಡಿಗರ ಮೇಲೇಕೆ ಅಷ್ಟು ದ್ವೇಷ? ಸಿದ್ದರಾಮಯ್ಯ ಸರಣಿ ಟ್ವೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2023, 11:51 IST
Last Updated 6 ಫೆಬ್ರುವರಿ 2023, 11:51 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ನಡುವೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ #ಆನ್ಸರ್‌ಮಾಡಿಮೋದಿ ಎಂಬ ಹ್ಯಾಷ್ ಟ್ಯಾಗ್ ನೀಡಿ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಇದು ಚುನಾವಣಾ ಸಂದರ್ಭ ಆಗಿರುವುದರಿಂದ ನರೇಂದ್ರ ಮೋದಿ, ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬರಗಾಲದ ಸಂದರ್ಭ ಮೋದಿ ರಾಜ್ಯದ ನೆರವಿಗೆ ಬರಲಿಲ್ಲ. ಆದರೆ, ಈಗ ಮತ ಕೇಳಲು ಬರುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ರಾಜ್ಯಕ್ಕೆ ಯೋಜನೆಗಳನ್ನು ನೀಡಿಲ್ಲ. ಚುನಾವಣೆ ಇದ್ದರೂ ರಾಜ್ಯವನ್ನು ಲಘುವಾಗಿ ಪರಿಗಣಿಸಲಾಗಿದೆ. ಬಿಜೆಪಿ ಸರ್ಕಾರವೇಕೆ ಪ್ರತಿ ಬಾರಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ಎಂಎನ್‌ಆರ್‌ಇಜಿಎ) ಉದ್ಯೋಗ ಸೃಷ್ಟಿ ದೃಷ್ಟಿಯಿಂದ ವರವಾಗಿದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕಿದೆ. ಯೋಜನೆಗೆ ಮೀಸಲಿಟ್ಟಿದ್ದ ನಿಧಿಯನ್ನು ಶೇ. 21.66 ರಷ್ಟು, ₹60,000 ಕೋಟಿ ಕಡಿತಗೊಳಿಸಲಾಗಿದೆ. ನರೇಂದ್ರ ಮೋದಿ ಏಕೆ ಭಾರತದ ಯುವಕರು ನಿರುದ್ಯೋಗಿಗಳಾಗಿರಬೇಕೆಂದು ಬಯಸುತ್ತಿದ್ದಾರೆ? ಯುವಕರು ತಮ್ಮ ಟ್ರೋಲ್‌ ಏಜೆಂಟ್‌ಗಳಾಗಿರಲಿ ಎಂದು ಅವರು ಬಯಸುತ್ತಿದ್ದಾರೆಯೇ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ADVERTISEMENT

ರೈತರ ಆದಾಯ ಮಾತ್ರ ಇದ್ದಷ್ಟೆ ಇದೆ. ಆದರೆ, ಕೃಷಿಯ ಖರ್ಚು ಮಾತ್ರ ಹೆಚ್ಚಾಗಿದೆ. ಆದಾಯ ದುಪ್ಪಟ್ಟು ಮಾಡುವ ಭರವಸೆ ಈಡೇರಿಸುವಲ್ಲಿ ವಿಫಲವಾಗಿರುವ ಮೋದಿ, ರಸಗೊಬ್ಬರ ಸಬ್ಸಿಡಿಯನ್ನು ₹50,121 ಕೋಟಿಯಷ್ಟು ಕಡಿತ ಮಾಡಿದ್ದಾರೆ. ಮೋದಿ ಯಾಕೆ ನಮ್ಮ ರೈತರನ್ನು ದ್ವೇಷಿಸುತ್ತಾರೆ? ಬೆಲೆ ಹೆಚ್ಚಳದ ಮೂಲಕ ಅವರಿಗೆ ಹೊರೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ದೇಶದ 80 ಕೋಟಿ ಜನಸಂಖ್ಯೆಯ ಹಸಿವು ನೀಗಿಸಲು ಯುಪಿಎ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರ ಸಬ್ಸಿಡಿಯನ್ನು ಮೋದಿ ಸರ್ಕಾರ ಶೇ. 31ರಷ್ಟು(₹89,844 ಕೋಟಿ) ಕಡಿತಗೊಳಿಸಿದೆ. ಭಾರತೀಯರು ಹಸಿವು ಮತ್ತು ಅಪೌಷ್ಠಿಕತೆಯಿಂದ ನರಳಬೇಕೆಂದು ಮೋದಿ ಏಕೆ ಬಯಸುತ್ತಿದ್ದಾರೆ? ಎಂದು ಕೇಳಿದ್ದಾರೆ.

ನರೇಂದ್ರ ಮೋದಿಯವರ ಖಾಸಾ ಗೆಳೆಯ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್‌ಬರ್ಗ ವರದಿ ಬೆತ್ತಲೆ ಮಾಡಿದೆ. ಇದರಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟವರು ಮತ್ತು ಎಲ್‌ಐಸಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ 56 ಇಂಚು ಎದೆಯ ಮೋದಿ ಏಕೆ ಈ ಬಗ್ಗೆ ತನಿಖೆಮಾಡದೆ ಮೌನಿಬಾಬಾ ಆಗಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಾಯಲ್ಲಿ ರೈತರ ಗುಣಗಾನ ಮಾಡುವ ನರೇಂದ್ರ ಮೋದಿ, ಬಜೆಟ್‌ನಲ್ಲಿ ಮಾಡಿದ್ದೇನು ಗೊತ್ತಾ? ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನೀಡುವ ಮೂಲಕ ಮಾರುಕಟ್ಟೆ ಪ್ರವೇಶಿಸಲು ನೀಡಲಾಗುತ್ತಿದ್ದ ಅನುದಾನವನ್ನು ₹1,500 ಕೋಟಿಯಿಂದ ₹1 ಲಕ್ಷಕ್ಕೆ ಇಳಿಸಲಾಗಿದೆ. ಅಂದರೆ ಯೋಜನೆಗೆ ಬೀಗ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಲೆ ಕುಸಿತ ಮತ್ತು ಬೀಜ, ಗೊಬ್ಬರದ ಬೆಲೆ ಏರಿಕೆಯಿಂದಾಗಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ನರೇಂದ್ರ ಮೋದಿ ಹತ್ತಿ ನಿಗಮದ ಬೆಂಬಲ ಬೆಲೆಯ ಅನುದಾನವನ್ನು ₹782 ಕೋಟಿಯಿಂದ ₹1 ಲಕ್ಷಕ್ಕೆ ಇಳಿಸಿದ್ದಾರೆ. ಅಂದರೆ ಬೆಂಬಲ ಬೆಲೆ ಕ್ಯಾನ್ಸಲ್ ಆಗಿದೆ. ನರೇಂದ್ರ ಮೊದಿಯವರೇ ರೈತರ ಮೇಲೆ ಏಕೆ ನಿಮಗಿಷ್ಟು ದ್ವೇಷ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಎಲ್‌ಪಿಜಿ ಸಿಲಿಂಡರ್ ದರ ದುಪ್ಪಟ್ಟಾಗಿದೆ. ಹಳ್ಳಿಯ ಬಡವರು ಮತ್ತೆ ಸೌದೆ ಒಲೆ ಮೊರೆಹೋಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಎಲ್‌ಪಿಜಿ ಸಬ್ಸಿಡಿಯನ್ನು ಮೋದಿ ಸರ್ಕಾರ ಶೇ. 75ರಷ್ಟು(₹2,257 ಕೋಟಿ) ಕಡಿಮೆ ಮಾಡಿದೆ. ನರೇಂದ್ರ ಮೊದಿಯವರೇ ಬಡವರ ಮೇಲೆ ಏಕೆ ನಿಮಗಿಷ್ಟು ದ್ವೇಷ ಎಂದು ಪ್ರಶ್ನೆ ಎತ್ತಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನಾ ವೆಚ್ಚ ₹53,000 ಕೋಟಿ. ಇದರಲ್ಲಿ ಶೇ 50ರಷ್ಟನ್ನು ಕೊಡುತ್ತೇವೆ ಎಂಬುದು ನರೇಂದ್ರ ಮೋದಿ ಸರ್ಕಾರದ ಭರವಸೆ. ಆದರೆ, ಈ ಬಜೆಟ್‌ನಲ್ಲಿ ನೀಡಿರುವುದು ಕೇವಲ ₹5,300 ಕೋಟಿ ಆಗಿದೆ. ಹಾಗಾದರೆ, ಯೋಜನೆ ಮುಗಿಯುವುದು 2050ಕ್ಕೋ? ನರೇಂದ್ರ ಮೋದಿಯವರೇ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಮೆಟ್ರೋ ರೈಲು ಯೋಜನೆಯನ್ನು ಬಜೆಟ್‌ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.