
ಎನ್. ರವಿಕುಮಾರ್
ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ದರ್ಜೆ ಹೊಂದಿರುವವರ ಪಟ್ಟಿಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿಯವರು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರರು, ಹಣಕಾಸು ಸಲಹೆಗಾರರು, ರಾಜಕೀಯ ಕಾರ್ಯದರ್ಶಿಗಳು, ಕಾನೂನು ಸಲಹೆಗಾರರು, ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು ಇವರೆಲ್ಲ ಸೇರಿ ಎಷ್ಟು ಜನ ಸಂಪುಟ ದರ್ಜೆಯ ಸ್ಥಾನಮಾನ ಪಡೆದಿದ್ದಾರೆ, ಇದರಿಂದ ಬೊಕ್ಕಸಕ್ಕೆ ಆಗುತ್ತಿರುವ ಹೊರೆ ಎಷ್ಟು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಿವಿಧ ನಿಗಮಗಳ 54 ಅಧ್ಯಕ್ಷರ ಸ್ಥಾನವನ್ನು ಸಚಿವ ಸಂಪುಟ ದರ್ಜೆಗೆ ಏರಿಸಲಾಗಿದೆ. ಅನೇಕರಿಗೆ ಸಚಿವ ಸಂಪುಟ ದರ್ಜೆ ಕೊಟಿದ್ದು, ಗ್ಯಾರಂಟಿಯ ರಾಜ್ಯದ ಜಾರಿ ಸಮಿತಿಯ ರಾಜ್ಯ ಸಮಿತಿ ಅಧ್ಯಕ್ಷರಿಗೂ ಇದೇ ಸ್ಥಾನಮಾನ ನೀಡಲಾಗಿದೆ. ಇವೆಲ್ಲ ಸೇರಿ ಕರ್ನಾಟಕದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಮುಖ್ಯಮಂತ್ರಿ ಸೇರಿ 150 ಜನರಿಗೆ ಕೊಡಲಾಗಿದೆ ಎಂದು ತಿಳಿಸಿದರು.
2003ರ ಕಾಯ್ದೆಯ ಪ್ರಕಾರ ಆಡಳಿತ ಪಕ್ಷದ ಶೇ 15ರಷ್ಟು ಶಾಸಕರು ಮತ್ತು ಸಂಸದರಿಗೆ ಮಾತ್ರ ಸಚಿವರನ್ನಾಗಿ ಮಾಡಬಹುದು. ಕರ್ನಾಟಕದಲ್ಲಿ 33 ಜನರನ್ನು ಮಾತ್ರ ಮಂತ್ರಿಗಳನ್ನಾಗಿ ಮಾಡಲು ಅವಕಾಶವಿದೆ. ಈ ಕಾರಣದಿಂದ ಸಚಿವರಾಗಲು ಬಯಸಿದವರು, ಸಂಪುಟದಲ್ಲಿ ಸ್ಥಾನ ಅಪೇಕ್ಷಿಸಿದವರಿಗೆ ಹಿಂಬಾಗಿಲ ಮೂಲಕ ಸಚಿವ ಸಂಪುಟದ ಸ್ಥಾನಮಾನವನ್ನು ಈ ಸರ್ಕಾರ ಕೊಡುತ್ತಿದೆ ಎಂದು ಟೀಕಿಸಿದರು.
ನಿಗಮಗಳ ಅಧ್ಯಕ್ಷರನ್ನು ಸಂಪುಟ ದರ್ಜೆಗೆ ಏರಿಸುವ ಮೂಲಕ ಈ ಸರ್ಕಾರ ಇತಿಹಾಸ ನಿರ್ಮಿಸಲು ಹೊರಟಿದೆ. ಈ ರೀತಿ ಸಂಪುಟ ದರ್ಜೆಗೇರಿಸಿದ ನಿಗಮಗಳಿಗೆ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂಬ ಮಾಹಿತಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.