ADVERTISEMENT

ಕಸ್ತೂರಿರಂಗನ್‌ ವರದಿಗೆ ವಿರೋಧ ಸರಿಯಲ್ಲ: ಎ.ಎನ್‌. ಯಲ್ಲಪ್ಪ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 16:02 IST
Last Updated 8 ಡಿಸೆಂಬರ್ 2021, 16:02 IST
ಎ.ಎನ್‌. ಯಲ್ಲಪ್ಪ ರೆಡ್ಡಿ
ಎ.ಎನ್‌. ಯಲ್ಲಪ್ಪ ರೆಡ್ಡಿ   

ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ.ಕೆ. ಕಸ್ತೂರಿ ರಂಗನ್‌ ನೀಡಿರುವ ವರದಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿರುವುದರಿಂದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಡಾ.ಅ.ನ. ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ.

ವರದಿ ತಿರಸ್ಕರಿಸುವಂತೆ ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿರುವ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಹಿಂದೆ ಮಾಧವ್‌ ಗಾಡ್ಗೀಳ್‌ ಸಮಿತಿ ವರದಿ ನೀಡಿತ್ತು. ಅದನ್ನು ಹಲವು ರಾಜ್ಯ ಸರ್ಕಾರಗಳು ವಿರೋಧಿಸಿದ್ದವು. ನಂತರ ಕಸ್ತೂರಿ ರಂಗನ್‌ ಸಮಿತಿ ನೇಮಿಸಲಾಯಿತು. ಗಾಡ್ಗೀಳ್‌ ಸಮಿತಿಯ ಶಿಫಾರಸುಗಳನ್ನು ಆದಷ್ಟೂ ತೆಳುವಾಗಿಸಿ, ಪಶ್ಚಿಮ ಘಟ್ಟಗಳಲ್ಲಿ ಮಾನವ ಕೇಂದ್ರಿ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ನೀಡುವ ಶಿಫಾರಸು ಮಾಡಲಾಗಿತ್ತು’ ಎಂದು ಹೇಳಿದ್ದಾರೆ.

ಕಸ್ತೂರಿ ರಂಗನ್‌ ವರದಿ ವಾಸ್ತವ ಸಂಗತಿಗಳನ್ನು ಆಧರಿಸಿಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿಲ್ಲ ಎಂದು ಸಚಿವರು ವಿರೋಧಕ್ಕೆ ಕಾರಣ ನೀಡಿದ್ದಾರೆ. ಸಚಿವರ ಪ್ರಕಾರ ಸರ್ವಾಜನಿಕ ಹಿತಾಸಕ್ತಿ ಎಂದರೆ ಪಶ್ಚಿಮ ಘಟ್ಟಗಳನ್ನು ಕೆಲವರ ಸ್ವಯಂ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದು ಎಂಬುದಾಗುತ್ತದೆ ಎಂದು ಟೀಕಿಸಿದ್ದಾರೆ.

ADVERTISEMENT

ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಅರಣ್ಯ ನಾಶ ಹೆಚ್ಚುತ್ತಿದೆ. 70 ವರ್ಷಗಳೊಳಗೆ ಮಾಲಿನ್ಯಕಾರಕ ಅನಿಲಗಳ ಉಗುಳುವಿಕೆ ತಡೆಯಲು ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದು ಸುಮ್ಮನೆ ಸಾಧ್ಯವಾಗುವುದಿಲ್ಲ. ಇಂತಹ ವರದಿಗಳ ಅನುಷ್ಠಾನ ಹಾಗೂ ಪರಿಣಾಮಕಾರಿ ಕ್ರಮಗಳಿಂದ ಮಾತ್ರ ಸಾಧ್ಯ ಎಂದಿದ್ದಾರೆ.

1993–94ರಲ್ಲಿ ಕೊಡಗು ಜಿಲ್ಲೆಯಲ್ಲಿ ಟಿಂಬರ್‌ ಮಾಫಿಯಾದಿಂದ ನಡೆದ ಅರಣ್ಯ ನಾಶದ ಕುರಿತು ತನಿಖೆ ನಡೆಸಲು ತಮ್ಮನ್ನು ನೇಮಿಸಲಾಗಿತ್ತು. ಆಗ ತಾವು ಸಲ್ಲಿಸಿದ್ದ ವರದಿಯನ್ನು ಸರ್ಕಾರ ಮೂಲೆಗುಂಪು ಮಾಡಿದೆ. ಮಾಧವ ಗಾಡ್ಗೀಳ್‌ ವರದಿ, ಕಸ್ತೂರಿ ರಂಗನ್‌ ವರದಿ ಮತ್ತು ಕೊಡಗಿನಲ್ಲಿ ನಡೆದ ಅರಣ್ಯ ನಾಶಕ್ಕೆ ಸಂಬಂಧಿಸಿದಂತೆ ತಾವು ನೀಡಿದ್ದ ವರದಿಗಳ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಯಲ್ಲಪ್ಪ ರೆಡ್ಡಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.