ಬೆಂಗಳೂರು: ರಾಜ್ಯ ಸರ್ಕಾರ 2006 ಏಪ್ರಿಲ್ 4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ಕರ್ತವ್ಯಕ್ಕೆ ಹಾಜರಾಗಿದ್ದ 11,366 ನೌಕರರನ್ನು ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್) ಸೇರಿಸಲು ಶೀಘ್ರ ಆದೇಶ ಹೊರಡಿಸಲು ಸರ್ಕಾರ ಭರವಸೆ ನೀಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್ ಅವರನ್ನು ನೌಕರರ ಸಂಘದ ಪದಾಧಿಕಾರಿಗಳ ಜತೆ ಭೇಟಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊಸ ಪಿಂಚಣಿ ಯೋಜನೆ ಜಾರಿಗೂ ಮೊದಲು ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ಸೇರಿಸಲು ಈಗಾಗಲೇ ಕೇಂದ್ರ ಸರ್ಕಾರ 2023 ಮಾರ್ಚ್‌ನಲ್ಲೇ ಅಧಿಸೂಚನೆ ಹೊರಡಿಸಿದೆ. ರಾಜ್ಯಗಳಿಗೂ ನಿರ್ದೇಶನ ನೀಡಿದೆ. ಕೇಂದ್ರದ ಆದೇಶದಂತೆ ಕರ್ನಾಟಕ ಸರ್ಕಾರ ಈಗಾಗಲೇ ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಒಪಿಎಸ್ ವ್ಯಾಪ್ತಿಗೆ ತಂದಿದೆ. ಬೇರೆ ರಾಜ್ಯಗಳು ಪ್ರಕ್ರಿಯೆ ಆರಂಭಿಸಿವೆ. 11,366 ನೌಕರರನ್ನು ತಕ್ಷಣ ಒಪಿಎಸ್ ಯೋಜನೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಕಡತ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯ ಹಂತದಲ್ಲಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ, ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಅತೀಕ್ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಉಪಾಧ್ಯಕ್ಷ ಎ.ಎಸ್.ಹರ್ಷ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.