ADVERTISEMENT

ಜಮೀನು ಮಾರಾಟಕ್ಕೆ ಅವಕಾಶ

ಭೂಸುಧಾರಣೆ ಮಸೂದೆಗೆ ಒಪ್ಪಿಗೆ; ಉದ್ಯಮಿಗಳಿಗೆ ಲಾಭ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 2:18 IST
Last Updated 20 ಮಾರ್ಚ್ 2020, 2:18 IST

ಬೆಂಗಳೂರು: ಭೂ ಸುಧಾರಣೆಗಳ ನಿಯಮ 109 ರಡಿ ಕೈಗಾರಿಕೆ ಸ್ಥಾಪಿಸಿ ಏಳು ವರ್ಷಗಳ ಬಳಿಕ ಅರ್ಥಿಕ ಮುಗ್ಗಟ್ಟಿನಿಂದ ನಿಭಾಯಿಸಲು ಸಾಧ್ಯವಾಗದಿದ್ದರೆ, ಮಾರಾಟ ಮಾಡಲು ಅವಕಾಶ ನೀಡುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಮಸೂದೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ, ಸಭಾತ್ಯಾಗದ ಮಧ್ಯೆ ಒಪ್ಪಿಗೆ ಸಿಕ್ಕಿತು.

ಕಂದಾಯ ಸಚಿವ ಆರ್‌.ಅಶೋಕ ಅವರು ಮಸೂದೆಯನ್ನು ಮಂಡಿಸಿ, ಉದ್ಯಮಿಗಳು ರೈತರಿಂದ ಖರೀದಿಸಿದ ಜಮೀನಿನಲ್ಲಿ ಕೈಗಾರಿಕೆ, ಶಿಕ್ಷಣ ಸಂಸ್ಥೆ, ದೇವಸ್ಥಾನ ಅಥವಾ ಮಠ ಮತ್ತಿತರ ಸಂಸ್ಥೆಗಳಿಗೆ ಈ ತಿದ್ದುಪಡಿ ಅನ್ವಯವಾಗುತ್ತದೆ. ಸರ್ಕಾರ ರೈತರಿಂದ ವಶಪಡಿಸಿ ಕೊಂಡು ಹಂಚಿಕೆ ಮಾಡಿದ ಜಮೀನಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಿದರು.

ಕೆಲವು ಕಾರ್ಖಾನೆಗಳು ನಷ್ಟಗೊಂಡು ನಡೆಸಲೂ ಆಗದೇ, ಮಾರಲೂ ಆಗದೇ ಸಂಕಷ್ಟಕ್ಕೆ ಸಿಲುಕಿ ರುತ್ತಾರೆ. ಅಂತಹವರಿಗೆ ಮಾರಾಟ ಮಾಡಲು ಅವಕಾಶ ಸಿಗುತ್ತದೆ. ಮಾರು ವವರು ಯಾವ ಉದ್ದೇಶದಿಂದ ಕಾರ್ಖಾನೆ ಸ್ಥಾಪಿಸಿರುತ್ತಾರೊ ಆ ಉದ್ದೇಶದ ಉದ್ಯಮಿಗಳಿಗೇ ಮಾರಬೇಕಾಗುತ್ತದೆ. ರಿಯಲ್‌ ಎಸ್ಟೇಟ್‌ ಅಥವಾ ಇತರ ಉದ್ದೇಶಗಳಿಗೆ ಪರಭಾರೆ ಮಾಡಲು ಅವಕಾಶ ಇರುವುದಿಲ್ಲ. 2014 ರಲ್ಲಿ ಮಾಡಿದ್ದ ತಿದ್ದುಪಡಿಯನ್ನು ಸರಳೀಕರಣ ಮಾಡಿದ್ದೇವೆ ಎಂದು ಅಶೋಕ ವಿವರಿಸಿದರು.

ADVERTISEMENT

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿ, ಈ ರೀತಿ ಮಾರಾಟ ಮಾಡಲು ಅವಕಾಶ ನೀಡಿದರೆ, ಜಮೀನನ್ನು ರಿಯಲ್ ಎಸ್ಟೇಟ್‌ ಉದ್ದೇಶ ಬಳಸಬಹುದು. ತಿದ್ದುಪಡಿ ಮೂಲಕ ಭೂಸುಧಾರಣಾ ಕಾಯ್ದೆಯ ಮೂಲವನ್ನೇ ಅಲುಗಾಡಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಧುಸ್ವಾಮಿ, 2014 ರಲ್ಲಿ ನಿಮ್ಮದೇ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ದೇವರಾಜ ಅರಸು ಅವರು ಮಾಡಿದ್ದ ಭೂಸುಧಾರಣೆಯ ಸ್ವರೂಪವನ್ನೇ ನಾಶ ಮಾಡಿದಿರಿ ಎಂದು ದೂರಿದರು.

ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಮಾತನಾಡಿ, ಜಾಗತೀಕರಣ ಮತ್ತು ಕೈಗಾರಿಕಾ ಅಭಿವೃದ್ಧಿಗೆ ತಿದ್ದುಪಡಿಯ ಅಗತ್ಯವಿದೆ ಎಂದು ಸ್ವಾಗತಿಸಿದರು. ಉಳಿದವರು ವಿರೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.