ADVERTISEMENT

ಹಾಸ್ಟೆಲ್‌ಗಳಲ್ಲಿನ 3,312 ಹೊರಗುತ್ತಿಗೆ ನೌಕರರನ್ನು ಮುಂದುವರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 10:47 IST
Last Updated 20 ಡಿಸೆಂಬರ್ 2018, 10:47 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸ್ಟೆಲ್ ನೌಕರರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸ್ಟೆಲ್ ನೌಕರರು ಪ್ರತಿಭಟನೆ ನಡೆಸಿದರು   

ಬೆಳಗಾವಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3,312 ಹೊರಗುತ್ತಿಗೆ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಹಾಗೂ ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದವರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘6 ತಿಂಗಳ ಅವಧಿಗೆ ಮಾತ್ರ ಮುಂದುವರಿಸಿ ನಂತರ ಬಿಡುಗಡೆ ಮಾಡಲಾಗುವುದು ಎಂದು ಆಗಸ್ಟ್‌ನಲ್ಲಿ ಮಾಡಿರುವ ಆದೇಶದಿಂದಾಗಿ, ಈ ನೌಕರರು ಹಾಗೂ ಕುಟುಂಬದವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದರು.

‘ಎಲ್ಲ ಹೊರಗುತ್ತಿಗೆ ನೌಕರರನ್ನೂ ನಿವೃತ್ತಿ ವಯಸ್ಸಿನವರೆಗೂ ಕೆಲಸದಲ್ಲಿ ಮುಂದುವರಿಸಬೇಕು. ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ, ಕಾಯಂ ಸಿಬ್ಬಂದಿಯನ್ನು ಹೊಸದಾಗಿ ನಿರ್ಮಾಣಗೊಂಡ ಹಾಸ್ಟೆಲ್‌ಗಳಿಗೆ ನೇಮಿಸಿದರೆ ನಮ್ಮನ್ನು ಹಳೆಯ ಹಾಸ್ಟೆಲ್‌ಗಳಲ್ಲಿ ಮುಂದುವರಿಸಲು ಸಾಧ್ಯವಾಗುತ್ತದೆ. ನಿವೃತ್ತಿ ಹೊಂದುವ ಕಾಯಂ ನೌಕರರಿಂದ ತೆರವಾಗುವ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ಸಿಬ್ಬಂದಿಯಲ್ಲಿ ನಿವೃತ್ತಿ ವಯಸ್ಸು ತಲುಪಿರುವವರನ್ನು ಸೂಕ್ತ ಪರಿಹಾರ ನೀಡಿ ನಿವೃತ್ತಿಗೊಳಿಸಿದರೆ, ಆ ಹುದ್ದೆಗಳಿಗೆ ನಮ್ಮನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳಿಗೆ ಜೋಳದ ರೊಟ್ಟಿ ಊಟ ನೀಡಲಾಗುತ್ತದೆ. ರೊಟ್ಟಿ ಮಾಡಲು ಹೆಚ್ಚಿನ ಸಮಯ ಹಾಗೂ ಶ್ರಮ ಬೇಕಾಗುತ್ತದೆ. ಹೀಗಾಗಿ ಇಲ್ಲಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ. ಆ ಹುದ್ದೆಗಳಿಗೆ ನಮ್ಮನ್ನೇ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ನೌಕರರಿಗೂ ವಾರದ ರಜೆ ನೀಡಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷ ನಿತ್ಯಾನಂದ ಸ್ವಾಮಿ, ಸಹ ಕಾರ್ಯದರ್ಶಿ ಕೆ. ಹನುಮೇಗೌಡ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.