ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಸಂವಿಧಾನಕ್ಕೆ ವಿರೋಧ: ಪತ್ರಕರ್ತ ಪಿ. ಸಾಯಿನಾಥ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 11:11 IST
Last Updated 14 ಫೆಬ್ರುವರಿ 2020, 11:11 IST
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ‘ಮೀಡಿಯಾ ಮಂಥನ – 2020’ ಕಾರ್ಯಕ್ರಮವನ್ನು ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ‘ಮೀಡಿಯಾ ಮಂಥನ – 2020’ ಕಾರ್ಯಕ್ರಮವನ್ನು ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸದೆ ದೇಶದ ರಾಜಕೀಯ ಸ್ವಾತಂತ್ರ ಅರ್ಥಹೀನ.ಪೌರತ್ವದ ತಿದ್ದುಪಡಿ ಕಾಯಿದೆ ದೇಶದ ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ‘ಮೀಡಿಯಾ ಮಂಥನ – 2020’ ಕಾರ್ಯಕ್ರಮದಲ್ಲಿ ಅವರು ‘ಉದಾರೀಕರಣದ ನಂತರದ ದೇಶದ ಪ್ರಜಾಪ್ರಭುತ್ವದ ವಾಸ್ತವ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು.

ದೇಶದಲ್ಲಿ 29 ವರ್ಷಗಳಿಂದ ಬೆಳೆದು ಬಂದ ಆರ್ಥಿಕ ಅಸಮಾನತೆ 6 ವರ್ಷಗಳಲ್ಲಿ ದೇಶದ ಆರ್ಥಿಕ, ಸಾಮಾಜಿಕ ಅಸಮಾನತೆ ನಾಟಕೀಯ ತಿರುವು ಪಡೆದುಕೊಂಡಿದ್ದು, ಅದು ಈಗ ಹೆಚ್ಚಾಗಿದೆ. ನೋಟು ರದ್ದತಿ, ಜಿಎಸ್‌ಟಿ ಹೇರಿಕೆ, ಗೋಹತ್ಯೆ ನಿಷೇಧ ಸೇರಿದಂತೆ ಹಲವು ಘಟನೆಗಳಿಂದ ಜನಸಾಮಾನ್ಯರು ಇನ್ನಷ್ಟು ತೊಂದರೆಗಿಡಾಗುವಂತೆ ಮಾಡಿದೆ. ರೈತರ ಆತ್ಮಹತ್ಯೆ, ನಿರುದ್ಯೋಗದ ಪ್ರಮಾಣ ಹೆಚ್ಚಿಸಿದೆ. ದೇಶದಲ್ಲಿ ಆರ್ಥಿಕ ಅಸಮಾನತೆ ಪರಿಸ್ಥಿತಿ 1991 ರಿಂದ ಆರಂಭಗೊಂಡು 2014 ರ ನಂತರ ತೀವ್ರವಾಗಿ ದೇಶದ ಜನಸಾಮಾನ್ಯರನ್ನು ಕಾಡತೊಡಗಿದೆ ಎಂದು ಸಾಯಿನಾಥ್ ಅವರು ಹೇಳಿದರು.

ADVERTISEMENT

1991 ರಿಂದ ದೇಶದ ಗ್ರಾಮೀಣ ಪ್ರದೇಶದಲ್ಲಿ ಬುಲೆಟ್‌ಟ್ರೈನ್, ವಿಶೇಷ ಆರ್ಥಿಕವಲಯ ಸೇರಿದಂತೆ ಇತರ ಆಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಂಡು, ಗ್ರಾಮೀಣ ಜನರ ಸಂಪತ್ತನ್ನು ದೋಚುವ ಕೆಲಸ ನಡೆಯುತ್ತಾ ಇದೆ. ಅವರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಯಿತು. ಆದರೆ, ಆ ಭರವಸೆಯನ್ನು ಸರ್ಕಾರ ಈಡೇರಿಸದೆ ಇದ್ದಾಗ, ಕೆಲ ಯೋಜನೆಗಳ ವಿರುದ್ಧ ಜನ ಸಂಘಟಿತರಾದಾಗ ರೈತರ ಮೇಲೆ ಹಲವು ಪ್ರಕರಣ ಹಾಕಿ ಅವರ ಹಕ್ಕುಗಳನ್ನು ಧಮನಿಸುವ ಪ್ರಯತ್ನ ದೇಶದಲ್ಲಿ ನಡೆತ್ತಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಕೃಷಿ ಕ್ಷೇತ್ರ ಹಿಂದಿಗಿಂತಲೂ ಹೆಚ್ಚಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 75 ರಷ್ಟು ಜನರು ತಿಂಗಳಿಗೆ ₹ 5 ಸಾವಿರಕ್ಕೂ ಕಡಿಮೆ ಸಂಪಾದನೆಯಲ್ಲಿ ಬದುಕುತ್ತಿದ್ದಾರೆ. 20 ವರ್ಷಗಳಲ್ಲಿ 3,15,000 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.15 ದಶಲಕ್ಷ ಮಂದಿ ಕೃಷಿಯನ್ನು ತೊರೆದಿದ್ದಾರೆ. ಮೇಕ್ ಇಂಡಿಯಾದ ನೈಜ ಕುಶಲಕರ್ಮಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಮಹಿಳೆಯರ ದುಡಿಮೆಗೆ ಸೂಕ್ತವಾದ ನ್ಯಾಯ ಸಿಗುತ್ತಿಲ್ಲ ಎಂದು ಸಾಯಿನಾಥ್ ಹೇಳಿದರು.

ಸ್ವಾತಂತ್ರದ ಸಂದರ್ಭದಲ್ಲಿ ದೇಶದ ಸಂವಿಧಾನ, ದೇಶದ ತ್ರಿವರ್ಣ ಧ್ವಜ, ರವೀಂದ್ರ ನಾಥ ಟ್ಯಾಗೋರ್ ರಚಿಸಿದ ಜನಗಣಮನ ಹಾಡಿನ ಬಗ್ಗೆ ಆಕ್ಷೇಪಿಸಿ, ಅದನ್ನು ಬದಲಾಯಿಸಲು ಯತ್ನಸಿದ ಶಕ್ತಿಗಳು ಇಂದು ದೇಶದ ಸಂವಿಧಾನ ಬದಲಾಯಿಸುವ ಪ್ರಯತ್ನದಲ್ಲಿ ತೊಡಗಿವೆ. ರಾಜಕೀಯವಾಗಿಯೂ ಆ ಶಕ್ತಿಗಳು ಅಧಿಕಾರವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ದೇಶದ ಸಂವಿಧಾನವನ್ನು ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾದರೆ ಸಂವಿಧಾನ ಬದಲಾಯಿಸುವುದನ್ನು ಇಲ್ಲಿನ ಪ್ರಜ್ಞಾವಂತ ನಾಗರಿಕರು ಸಂಘಟಿತರಾಗಿ ತಡೆಯಬೇಕಾಗಿದೆ ಎಂದು ಪಿ.ಸಾಯಿನಾಥ್ ಹೇಳಿದರು.

ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಡಯೋನಿಸಿಯಸ್, ಪ್ರಾಂಶುಪಾಲ ಪ್ರವೀಣ್ ಮಾರ್ಟಿಸ್, ಅಲೋಶಿಯಸ್ ಕಾಲೇಜು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಮೆಲ್ವಿನ್ ಪಿಂಟೋ, ಸಂಚಾಲಕಿಯರಾದ ದೇವಿಶ್ರೀ ಶೆಟ್ಟಿ, ಹರ್ಷಿತಾ ವರ್ಗೀಸ್, ವೈಶಾಲಿ ಪುತ್ರನ್ ಇದ್ದರು.

‘ಒಂದು ಮತದವರನ್ನು ಹೊರಗಿಡುವ ಯತ್ನ’
ಪೌರತ್ವ ತಿದ್ದುಪಡಿ ಕಾಯಿದೆ ಒಂದು ಮತದವರನ್ನು ಹೊರತು ಪಡಿಸಿ ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ದೇಶದ ಸಂವಿಧಾನದ ಮೇಲೆ ಮಾಡುತ್ತಿರುವ ದಾಳಿ. ದೇಶದ ಜಾತ್ಯತೀತ, ಬಹು ಸಂಸ್ಕೃತಿ ಎತ್ತಿ ಹಿಡಿದ ಸಂವಿಧಾನವನ್ನು ತಿರಸ್ಕರಿಸಿದಂತಾಗಿದೆ. ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಸಂವಿಧಾನದ ಮೂಲ ಆಶಯವಾಗಿದೆ. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುತ್ತಿರುವ ಹೋರಾಟ ದೇಶದ ಸಂವಿಧಾನವನ್ನು ಉಳಿಸಿಕೊಳ್ಳಲು ನಡೆಯುತ್ತಿರುವ, ಏಕತೆ ಹೋರಾಟದ ಪ್ರತೀಕವಾಗಿದೆ ಎಂದು ಪಿ.ಸಾಯಿನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.