ADVERTISEMENT

ಶಿಷ್ಯವೇತನ ಕೊಟ್ಟು, ರಜೆ–ಸೇವಾವಧಿ ಕಡಿತ

ಪದವಿಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕರ ಅಸಮಾಧಾನ

ಪೀರ್‌ ಪಾಶ, ಬೆಂಗಳೂರು
Published 16 ನವೆಂಬರ್ 2018, 20:00 IST
Last Updated 16 ನವೆಂಬರ್ 2018, 20:00 IST
   

ಬೆಂಗಳೂರು: ಪಿ.ಯು.ಉಪನ್ಯಾಸಕ ಹುದ್ದೆಗೆ ನೇಮಕಾತಿ ಹೊಂದಿ, ಇಲಾಖೆಯ ನಿರ್ದೇಶನದ ಮೇರೆಗೆ ಬಿ.ಇಡಿ. ಕೋರ್ಸ್‌ ಮಾಡುತ್ತಿರುವ ಉಪನ್ಯಾಸಕರ 120 ಗಳಿಕೆ ರಜೆಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಕತ್ತರಿ ಹಾಕುತ್ತಿದೆ. ಅಲ್ಲದೆ, ಬಿ.ಇಡಿ. ವ್ಯಾಸಂಗ ದಿನಗಳನ್ನು ಸೇವಾ ಅವಧಿ ಎಂದೂ ಪರಿಗಣಿಸುತ್ತಿಲ್ಲ.

624 ಪಿ.ಯು.ಉಪನ್ಯಾಸಕರು ನೇಮಕಾತಿ ಹೊಂದಿದ ಬಳಿಕ, ಬಿ.ಇಡಿ. ಪದವಿ ಪಡೆಯಲು ಬೋಧನಾ ಕರ್ತವ್ಯದಿಂದ ಹೊರಗಿದ್ದಾರೆ. ಇವರ ಕಲಿಕಾ ಅವಧಿಯನ್ನು ವೇತನರಹಿತ ರಜೆ ಎಂದು ಇಲಾಖೆ ಪರಿಗಣಿಸುತ್ತಿರುವುದು ಉಪನ್ಯಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

2013ರಲ್ಲಿ ಒಟ್ಟು 1,763 ಪಿ.ಯು. ಉಪನ್ಯಾಸಕರ ನೇಮಕಾತಿ ಆಗಿತ್ತು. ಅದರಲ್ಲಿ 624 ಉಪನ್ಯಾಸಕರು ಬಿ.ಇಡಿ. ಪದವಿ ಪಡೆದಿರಲಿಲ್ಲ. ಆಗ, ನಾಲ್ಕು ವರ್ಷಗಳ ಒಳಗೆ, ಪದವಿ ಪಡೆಯಲು ಉಪನ್ಯಾಸಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹಾಗೆಯೇ, ಓದಿಗಾಗಿ ತಿಂಗಳಿಗೆ ₹ 24,000 ಶಿಷ್ಯವೇತನ ನೀಡಲು ನಿರ್ಧರಿಸಲಾಯಿತು. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ, ಉಪನ್ಯಾಸಕರು ಬಿ.ಇಡಿ. ಕೋರ್ಸ್‌ ಕಲಿಯಲು 2016ರ ಡಿಸೆಂಬರ್‌ 28ರಿಂದ ಕಾಲೇಜುಗಳೆಡೆಗೆ ನಡೆದರು.

ADVERTISEMENT

120 ರಜೆ ಕಟ್‌: ಇಲಾಖೆ ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ, ಬಿ.ಇಡಿ ಶಿಕ್ಷಣ ಪಡೆಯುವ ಅವಧಿಯನ್ನು ಡೈಜ್ ನಾನ್‌(ಕೆಲಸ ಮಾಡದ ದಿನಗಳು) ಎಂದು ಪರಿಗಣಿಸದೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 112(9)ರ ಉಪ ನಿಯಮಗಳ ಮೇರೆಗೆ 120 ದಿನಗಳ ಗಳಿಕೆ ರಜೆಗಳನ್ನು ಮಂಜೂರು ಮಾಡುತ್ತಿದೆ. ಬಾಕಿ ಉಳಿದಿರುವ ಅವಧಿಗೆ ವೇತನರಹಿತ ರಜೆ ನೀಡಲು ನಿರ್ಧರಿಸಿದೆ.

ಉಪನ್ಯಾಸಕರುಪ್ರೊಬೇಷನರಿ ಅವಧಿಯಲ್ಲಿ ಇರುವುದರಿಂದ ಅವರಿಗೆ ಸೇವಾ ನಿಯಮಗಳಪ್ರಕಾರ ವೇತನ ಸಹಿತ ರಜೆ ನೀಡಲು ಅವಕಾಶ ಇರುವುದಿಲ್ಲ ಎಂದು ಇಲಾಖೆ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಒಂದು ವೇಳೆ ವೇತನ ಸಹಿತ ರಜೆ ನೀಡಿದರೆ, ಅಂದಾಜು ₹ 34 ಕೋಟಿ ಆರ್ಥಿಕ ಹೊರೆ ಬೀಳಲಿದೆ ಎಂಬುದು ಇಲಾಖೆ ಲೆಕ್ಕಚಾರ.

**

‘ಅವರಿಗೆ ಹಂಗೆ, ನಮಗ್ಯಾಕೆ ಹಿಂಗೆ’

‘2009ರಲ್ಲಿ 2,578 ಉಪನ್ಯಾಸಕರ ನೇಮಕಾತಿ ಆಗಿತ್ತು. ಅವರಲ್ಲಿಯೂ 1,347 ಅಭ್ಯರ್ಥಿಗಳಿಗೆ ಬಿ.ಇಡಿ. ಆಗಿರಲಿಲ್ಲ. ಅವರು ಈ ವೃತ್ತಿಪರ ಕೋರ್ಸ್‌ ಪಡೆಯಲು ವೇತನ ಸಹಿತ ರಜೆ ನೀಡಲಾಗಿತ್ತು. ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗೆ ಬಡ್ತಿಯಾಗಿ ಹೋಗುವ ಇಂಗ್ಲಿಷ್‌ ಮತ್ತು ವಿಜ್ಞಾನದ ಶಿಕ್ಷಕರಿಗೆ ಬಿ.ಇಡಿ. ಕೋರ್ಸ್‌ ಮಾಡಲು ವೇತನ ಸಹಿತ ರಜೆ ನೀಡುತ್ತಾರೆ. ಸೇವಾವಧಿಯನ್ನೂ ಪರಿಗಣಿಸುತ್ತಾರೆ. ಆ ನಿಯಮವನ್ನು ನಮಗೂ ಅನ್ವಯಿಸಿ’ ಎಂಬುದು ಉಪನ್ಯಾಸಕರ ಒತ್ತಾಯವಾಗಿದೆ.

‘ನಾಲ್ಕು ವರ್ಷಗಳ ಸೇವಾವಧಿಯನ್ನು ಪ್ರೊಬೇಷನರಿ ಎಂದು ಪರಿಗಣಿಸುತ್ತಿರುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ. ನಮಗೆ ವರ್ಷಕ್ಕೆ 10 ಗಳಿಗೆ ರಜೆ ಇರುತ್ತವೆ. ಅವುಗಳನ್ನು ಇಲಾಖೆ ಈಗ ಕಿತ್ತುಕೊಳ್ಳುತ್ತಿದೆ’ ಎಂದು ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
**
ಅಂಕಿ–ಅಂಶ

624 - ಬಿ.ಇಡಿ. ಕೋರ್ಸ್‌ ಮಾಡುತ್ತಿರುವ ಉಪನ್ಯಾಸಕರು

₹ 35.56 ಕೋಟಿ - ಎರಡು ವರ್ಷಗಳ ಶಿಷ್ಯ ವೇತನ ನೀಡಲು ಇಲಾಖೆ ಮೀಸಲಿಟ್ಟ ಮೊತ್ತ

₹ 35.05 ಕೋಟಿ - ವೇತನ ಸಹಿತ ರಜೆ ನೀಡಿದರೆ ಆಗುವ ವಾರ್ಷಿಕ ವೆಚ್ಚ
**
ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಬೇಕು. ಅವರ ಕಲಿಕಾ ಅವಧಿಯನ್ನು ನಿಯೋಜನೆ ಮೇರೆಗೆ ಕಳುಹಿಸಲಾಗಿದೆ ಎಂದು ಪರಿಗಣಿಸಬೇಕು
– ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.