ADVERTISEMENT

ಪಾದರಾಯನಪುರ ಗಲಾಟೆ: ಸಿಕ್ಕಿಬಿದ್ದ ಇರ್ಫಾನ್ 

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 21:52 IST
Last Updated 27 ಏಪ್ರಿಲ್ 2020, 21:52 IST
ಕೆಎಫ್ ಡಿ ಇರ್ಫಾನ್
ಕೆಎಫ್ ಡಿ ಇರ್ಫಾನ್    

ಬೆಂಗಳೂರು: ಪಾದರಾಯಪುರ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಕೆಎಫ್‌ಡಿ ಇರ್ಫಾನ್‌, ಜಗಜೀವನ್‌ರಾಮ ನಗರ ಪೊಲೀಸರಿಗೆ ಸೋಮವಾರ ಸಿಕ್ಕಿಬಿದ್ದಿದ್ದಾನೆ.

‘ಗಲಾಟೆಗೆ ಪ್ರಚೋದನೆ ನೀಡಿದ್ದ ಇರ್ಫಾನ್, ಗಲಾಟೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಬೆಂಗಳೂರಿನ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಕೊರೊನಾ ಸೋಂಕಿತರ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಶಂಕಿತರನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಪಾದರಾಯನಪುರದ ಅರಫತ್‌ ನಗರಕ್ಕೆ ಇದೇ 19ರಂದು ರಾತ್ರಿ ಹೋಗಿದ್ದರು. ಅದೇ ವೇಳೆಯೇ ಗಲಾಟೆ ಮಾಡಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು.

ADVERTISEMENT

‘ಗಲಾಟೆಗೂ ಮುನ್ನಾದಿನ ಇರ್ಫಾನ್, ತನ್ನ ಮನೆಗೆ ಇತರೆ ಆರೋಪಿಗಳನ್ನು ಕರೆಸಿ ಮಾತನಾಡಿದ್ದ. ಕ್ವಾರಂಟೈನ್ ಮಾಡಲು ಯಾರೇ ಬಂದರೂ ಉಳಿಸಬೇಡಿ ಎಂದು ಹೇಳಿ ಪ್ರಚೋದನೆ ನೀಡಿದ್ದ. ಗಲಾಟೆ ದಿನವೂ ಸ್ಥಳದಲ್ಲಿದ್ದ ಕೂಗಾಡಿದ್ದ’ ಎಂದು ಮೂಲಗಳು ತಿಳಿಸಿವೆ.

ಗುಜರಿ ವ್ಯಾಪಾರಿ: ಇರ್ಫಾನ್‌ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಯೊಬ್ಬರು, ‘ಗಲಾಟೆ ಬಳಿಕ ತಲೆಮರೆಸಿಕೊಂಡಿದ್ದ ಇರ್ಫಾನ್, ಬೇರೆ ಊರುಗಳಿಗೆ ಹೋಗಲು ಪ್ರಯತ್ನಿಸಿದ್ದ. ಲಾಕ್‌ಡೌನ್ ಇದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ’ ಎಂದರು.

‘ಗುಜರಿ ವ್ಯಾಪಾರ ಮಾಡುತ್ತಿದ್ದ ಇರ್ಫಾನ್, ಕೆಎಫ್‌ಡಿ ಇರ್ಫಾನ್ ಎಂದೇ ಗುರುತಿಸಿಕೊಳ್ಳುತ್ತಿದ್ದ. ಗಲಾಟೆಗೆ ಈತನೇ ಪ್ರಚೋದನೆ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಗಲಾಟೆ ಹಿಂದೆ ಹಲವರ ಕೈವಾಡವಿರುವ ಅನುಮಾನವಿದೆ. ಇರ್ಫಾನ್‌ ವಿಚಾರಣೆಯಿಂದಲೇ ಅದು ಬಹಿರಂಗವಾಗಬೇಕಿದೆ. ಹಲವು ಆಯಾಮಗಳಲ್ಲಿ ತನಿಖೆಯೂ ನಡೆಯುತ್ತಿದೆ’ ಎಂದೂ ಅವರು ಹೇಳಿದರು.

ಕೊರೊನಾ ಪರೀಕ್ಷೆ
ಆರೋಪಿ ಇರ್ಫಾನ್‌ನನ್ನು ಬಂಧಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ದು ಕೊರೊನಾ ಸೋಂಕು ಪರೀಕ್ಷೆ ಮಾಡಿಸಲಾಗಿದೆ. ಅದರ ವರದಿ ಬರುವುದು ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.