ADVERTISEMENT

ಅಬ್ದುಲ್ ಖಾದರ್ ನಡಕಟ್ಟಿ- ಗಮಕ ಕಲಾವಿದ ಎಚ್‌.ಆರ್.ಕೇಶವಮೂರ್ತಿಗೆ ಒಲಿದ ಪದ್ಮಶ್ರೀ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:02 IST
Last Updated 25 ಜನವರಿ 2022, 19:02 IST
ಕೂರಿಗೆ ಸಿದ್ಧಪಡಿಸುವ ಕಾಯಕದಲ್ಲಿ ಅಬ್ದುಲ್ ಖಾದರ್ ನಡಕಟ್ಟಿ
ಕೂರಿಗೆ ಸಿದ್ಧಪಡಿಸುವ ಕಾಯಕದಲ್ಲಿ ಅಬ್ದುಲ್ ಖಾದರ್ ನಡಕಟ್ಟಿ   

ಧಾರವಾಡ: ಸಾಂಪ್ರದಾಯಿಕ ಕೃಷಿಗೆ ಆಧುನಿಕ ಸ್ಪರ್ಶದ ಮೂಲಕ ಹೊಸ ಸಾಧ್ಯತೆಯನ್ನು ಹುಟ್ಟು ಹಾಕಿದವರು ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿ.

ನಾಲ್ಕು ದಶಕಗಳ ಹಿಂದೆ ಆಧುನಿಕ ಕೂರಿಗೆ ಆವಿಷ್ಕಾರ ಮಾಡಿದ ಅಬ್ದುಲ್ ಖಾದರ್ ಅವರು ‘ನಡಕಟ್ಟಿನ‘ ಎಂಬ ಹೆಸರಿನ ಮೂಲಕ ಉತ್ತರ ಕರ್ನಾಟಕದ ಮನೆಮಾತಾಗಿದ್ದಾರೆ.

ಪಿತ್ರಾರ್ಜಿತವಾಗಿ 60 ಎಕರೆ ಜಮೀನು ಇವರಿಗೆ ಸಿಕ್ಕಿದ್ದರೂ, ತಮ್ಮ ಅನ್ವೇಷಣೆಗಾಗಿ 40 ಎಕರೆ ಜಮೀನನ್ನು ಕಳೆದುಕೊಂಡರು. ಸಾಕಷ್ಟು ಸಾಲ ಮಾಡಿಕೊಂಡಿದ್ದರೂ ಛಲ ಬಿಡದೆ ಆಧುನಿಕ ಕೂರಿಗೆಯನ್ನು ಇವರು ಸಿದ್ಧಪಡಿಸಿದರು. 2004ರಿಂದ ಸುಮಾರು 10ಸಾವಿರಕ್ಕೂ ಹೆಚ್ಚು ಕೂರಿಗೆಗಳನ್ನು ಇವರು ಸಿದ್ಧಪಡಿಸಿ ಮಾರಾಟ ಮಾಡಿದ್ದಾರೆ. ಕೂರಿಗೆಯೊಂದಿಗೆ ರೋಟೊವೇಟರ್, ಗೊಬ್ಬರ ಹಾಕುವ, ಬೀಜ ಬಿತ್ತುವ, ಎಡೆ ಹೊಡೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರವನ್ನು ಇವರು ಹೊಸ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ADVERTISEMENT

ತಮ್ಮ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರದಲ್ಲಿ 150ಕ್ಕೂ ಹೆಚ್ಚು ಜನಕ್ಕೆ ಉದ್ಯೋಗ ಕಲ್ಪಿಸಿದ್ದಾರೆ. ತಮ್ಮ ಕೃಷಿ ಆವಿಷ್ಕಾರಕ್ಕೆ ಪೇಟೆಂಟ್ ಕೂಡಾ ಪಡೆದಿರುವ ಅಬ್ದುಲ್ ಖಾದರ್‌ ಅವರಿಗೆ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕೃಷಿ ಅನ್ವೇಷಕ್ ಪ್ರಶಸ್ತಿಗಳೂ ಅವರಿಗೆ ಲಭಿಸಿವೆ.

ಗಮಕ ಕಲಾವಿದಎಚ್‌.ಆರ್.ಕೇಶವಮೂರ್ತಿ

ಶಿವಮೊಗ್ಗ: ಎಚ್‌.ಆರ್.ಕೇಶವಮೂರ್ತಿ ಅವರದು ಶಿವಮೊಗ್ಗ ಸಮೀಪದ ಮತ್ತೂರು ಹೊಸಳ್ಳಿ. ರಾಮಸ್ವಾಮಿ ಶಾಸ್ತ್ರಿ–ಲಕ್ಷ್ಮೀದೇವಮ್ಮ ದಂಪತಿಪುತ್ರ. 1934ರಲ್ಲಿ ಜನಿಸಿದ್ದ ಅವರುಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು.

ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾದ ಅವರು 16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ‘ಶತರಾಗಿ’ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.

ರಾಜ್ಯ, ದೇಶದ ಹಲವೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಅವರ ಸಾಧನೆಗೆ ‘ಕುಮಾರವ್ಯಾಸ ಪ್ರಶಸ್ತಿ’, ‘ರಾಜ್ಯೋತ್ಸವ’ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಹೊಸಳ್ಳಿಯಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.