ADVERTISEMENT

ಪಹಲ್ಗಾಮ್‌ ಭಯೋತ್ಪಾದಕ ದಾಳಿ: ಒಣ ಹಣ್ಣು ಸಾಗಾಟಕ್ಕೆ ಹೊಡೆತ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 23:52 IST
Last Updated 30 ಏಪ್ರಿಲ್ 2025, 23:52 IST
ಒಣ ಹಣ್ಣುಗಳು
ಒಣ ಹಣ್ಣುಗಳು   

ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಒಣಗಿದ ಹಣ್ಣುಗಳ (ಡ್ರೈ ಫ್ರೂಟ್ಸ್‌) ಸಾಗಾಟಕ್ಕೆ ಹೊಡೆತ ನೀಡಿದೆ. ಪರಿಣಾಮ ಕಾಶ್ಮೀರ ಹಾಗೂ ಆ ಮಾರ್ಗವಾಗಿ ಪೂರೈಕೆಯಾಗುವ ಒಣಗಿದ ಹಣ್ಣುಗಳ ಬೆಲೆ ವಿಪರೀತ ಏರಿಕೆಯಾಗಿದೆ.

ಕಾಶ್ಮೀರದ ಬಾದಾಮಿ (ಚಿಕ್ಕ ಬಾದಾಮಿ), ವಾಲ್‌ನಟ್‌, ಅಪ್ರಿಕಾಟ್‌, ಶಿಲಾಜಿತ್‌ (ಗಿಡಮೂಲಿಕೆ), ಜೇನುತುಪ್ಪ ಸೇರಿದಂತೆ  ಸರಬರಾಜು ಆಗುವ ಆಹಾರ ಪದಾರ್ಥಗಳ ಪೂರೈಕೆ ಪ್ರಮಾಣ ಬಹಳ ಕಡಿಮೆಯಾಗಿದೆ. ಹಸಿ ಹಣ್ಣುಗಳಾದ ಚೆರ‍್ರಿ, ಪಾಮ್‌, ಪಿಯರ್ಸ್‌ಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಇದಲ್ಲದೇ ಅಫ್ಗಾನಿಸ್ತಾನದ ಕಂದಹಾರ್‌, ಕಾಬೂಲ್‌ನಿಂದ ಒಣ ಹಣ್ಣುಗಳು ಅಟ್ಟಾರಿ- ವಾಘಾ ಗಡಿ ಮೂಲಕ ಭಾರತಕ್ಕೆ ಪೂರೈಕೆಯಾಗುತ್ತಿದ್ದವು. ಪಹಲ್ಗಾಮ್‌ ದಾಳಿ ಬಳಿಕ ಪಹಲ್ಗಾಮ್‌, ಶ್ರೀನಗರಗಳನ್ನು ಸಂಪರ್ಕಿಸುವ ರಸ್ತೆಗಳನ್ನು, ವಾಘಾ ಗಡಿ ಸಂಪರ್ಕವನ್ನು ಮುಚ್ಚಲಾಗಿದೆ. ಇದೆಲ್ಲ ದರ ಏರಿಕೆಯಾಗಲು ಕಾರಣ ಎಂದು ಶಿವಾಜಿನಗರ ರಸೆಲ್‌ ಮಾರುಕಟ್ಟೆ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕಂಟೋನ್ಮೆಂಟ್‌ ಹಣ್ಣು ಮತ್ತು ಒಣ ಹಣ್ಣು ವರ್ತಕರ ಸಂಘದ ಅಧ್ಯಕ್ಷ ಮಹಮ್ಮದ್‌ ಇದ್ರೀಸ್‌ ಚೌಧರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಾಶ್ಮೀರದಿಂದ ಪೂರೈಕೆಯಾಗುವ ವಾಲ್‌ನಟ್‌ ಎಣ್ಣೆ, ಬಾದಾಮಿ ಎಣ್ಣೆಯನ್ನು ಚಿಕ್ಕ ಮಕ್ಕಳಿಗೆ ಮಾಲೀಶ್‌ ಮಾಡಲು ಬಳಸಲಾಗುತ್ತದೆ. ಈ ಎಣ್ಣೆ ಕೂಡ ಪೂರೈಕೆಯಾಗುತ್ತಿಲ್ಲ. ಗರ್ಭಿಣಿಯರು ಹೆಚ್ಚಾಗಿ ಬಳಸುವ ಕೇಸರಿ ಪೂರೈಕೆ ಬಹುತೇಕ ಕಡಿಮೆಯಾಗಿದೆ. ತಾರಾ ಹೋಟೆಲ್‌ಗಳಲ್ಲಿಯೇ ಒಣ ಹಣ್ಣುಗಳಿಗೆ ಭಾರಿ ಬೇಡಿಕೆ ಇರುವುದು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೇ ಹೋದಾಗ ಬೆಲೆ ಏರಿಕೆ ಆಗುವುದು ಸಹಜ ಎಂದು ವರ್ತಕರು ತಿಳಿಸಿದ್ದಾರೆ.

ಶೇ 50ರಷ್ಟು ಬೆಲೆ ಹೆಚ್ಚಳ ಏಪ್ರಿಲ್‌ 22ರಿಂದ ಒಣ ಹಣ್ಣುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಇದರಿಂದಾಗಿ ಶೇ 20ರಿಂದ ಶೇ 50ರವರೆಗೆ ಬೆಲೆ ಹೆಚ್ಚಳವಾಗಿದೆ. ಶ್ರೀನಗರ ಪಹಲ್ಗಾಮ್‌ ಸಹಿತ ವಿವಿಧೆಡೆ ರಸ್ತೆಗಳಿಗೆ ತಡೆಯೊಡ್ಡಿರುವುದನ್ನು ತೆರವುಗೊಳಿಸುವವರೆಗೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲ.
ಮಹಮ್ಮದ್‌ ಇದ್ರೀಸ್‌ ಚೌಧರಿ, ಕಂಟೋನ್ಮೆಂಟ್‌ ಹಣ್ಣು ಮತ್ತು ಒಣ ಹಣ್ಣು ವರ್ತಕರ ಸಂಘದ ಅಧ್ಯಕ್ಷ

ಕಾಶ್ಮೀರದ ಒಣ ಹಣ್ಣುಗಳನ್ನು ಅಲ್ಲಿನ ವರ್ತಕರು ಜಮ್ಮು ಮಾರುಕಟ್ಟೆಗೆ ತರುತ್ತಾರೆ. ಅಲ್ಲಿಂದ ಸಗಟು ವರ್ತಕರು ದೆಹಲಿಗೆ ತರುತ್ತಾರೆ. ದೆಹಲಿಯಿಂದ ದೇಶದ ವಿವಿಧ ನಗರಗಳಿಗೆ ಸರಬರಾಜು ಮಾಡಲಾಗುತ್ತದೆ. ಈಗಾಗಲೇ ಸರಬರಾಜು ಆಗಿರುವ ಒಣ ಹಣ್ಣುಗಳನ್ನು ಮಧ್ಯವರ್ತಿಗಳು ದಾಸ್ತಾನು ಇಟ್ಟುಕೊಂಡಿದ್ದಾರೆ. ಪೂರೈಕೆ ಕಡಿಮೆಯಾಗಿರುವ ಸಂದರ್ಭವನ್ನು ಬಳಸಿಕೊಂಡು ಅವರು ಬೆಲೆ ಏರಿಕೆ ಮಾಡಿದ್ದಾರೆ. ಪರಿಸ್ಥಿತಿ ತಿಳಿಗೊಂಡರೆ ಮುಂದೆ ಬೆಲೆ ಇಳಿಕೆಯಾಗಬಹುದು. ಬಿಗು ವಾತಾವರಣ ಮುಂದುವರಿದರೆ ಒಂದೆರಡು ತಿಂಗಳ ಬಳಿಕ ದರ ಎಲ್ಲಿಗೆ ತಲುಪಲಿದೆ ಎಂದು ಹೇಳುವುದು ಕಷ್ಟ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದರು.

ಸೌದಿ ಅರೇಬಿಯಾದಿಂದ ಪೂರೈಕೆಯಾಗುವ ಖರ್ಜೂರ, ಮಂಗಳೂರಿನಿಂದ ಬರುವ ಗೋಡಂಬಿಯ ಕೊರತೆ ಉಂಟಾಗಿಲ್ಲ. ದೊಡ್ಡ ಬಾದಾಮಿಗೂ ತೊಂದರೆ ಇಲ್ಲ. ಏಪ್ರಿಲ್‌ ಮತ್ತು ಮೇ ತಿಂಗಳು ಕಾಶ್ಮೀರ, ಅಫ್ಗಾನಿಸ್ತಾನದಿಂದ ಒಣಹಣ್ಣುಗಳು ಪೂರೈಕೆಯಾಗುವ ಸಮಯ. ಅಲ್ಲದೇ ಕಾಶ್ಮೀರಕ್ಕೆ ಇದೇ ಎರಡು ತಿಂಗಳಲ್ಲಿ ಹೆಚ್ಚು ಪ್ರವಾಸಿಗರು ತೆರಳುತ್ತಾರೆ. ದಾಳಿಯಿಂದಾಗಿ ಇದಕ್ಕೆಲ್ಲ ಕಡಿವಾಣ ಬಿದ್ದಿದ್ದರಿಂದ ಅಲ್ಲಿನ ರೈತರು, ದೇಶದ ವರ್ತಕರು ತೊಂದರೆಗೆ ಒಳಗಾಗಿದ್ದಾರೆ ಎಂಬುದು ಅವರ ವಿವರಣೆಯಾಗಿದೆ.

ಅಫ್ಗಾನಿಸ್ತಾನದಿಂದ ಪರ್ಯಾಯ ಮಾರ್ಗದ ಮೂಲಕ ಒಣ ಹಣ್ಣು ತರಿಸುವ, ಯುಎಇ, ಇರಾಕ್‌ಗಳಿಂದಲೂ ಆಮದು ಮಾಡಿಕೊಳ್ಳುವ ಯೋಜನೆಯನ್ನು ದೊಡ್ಡ ವರ್ತಕರು ಇಟ್ಟುಕೊಂಡಿದ್ದಾರೆ. ಆಗ ಅಗತ್ಯ ಇರುವಷ್ಟು ಒಣ ಹಣ್ಣುಗಳು ಸಿಗಬಹುದಾದರೂ ಬೆಲೆ ಇಳಿಕೆ ಕಷ್ಟವಾಗಬಹುದು ಎಂದು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.