ADVERTISEMENT

ಪಾಕ್‌ ಮೇಲೆ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಸೇನೆಗೆ ಸಲ್ಲಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಮೇ 2025, 7:48 IST
Last Updated 12 ಮೇ 2025, 7:48 IST
   

ಎಚ್‌.ಡಿ. ಕೋಟೆ (ಮೈಸೂರು ಜಿಲ್ಲೆ): ಪಾಕಿಸ್ತಾನದ ಮೇಲೆ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಸೇನೆಯವರಿಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಅದನ್ನು ಕ್ಲೇಮ್ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಸೋಮವಾರಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇವತ್ತು ಎರಡೂ ದೇಶಗಳ ಸೇನಾಧಿಕಾರಿಗಳ ಸಭೆ ಇದೆ. ಅಲ್ಲಿ ಏನು ತೀರ್ಮಾನ ಆಗುತ್ತದೆಯೋ ನೋಡೋಣ ಎಂದರು.

1971ರ ಯುದ್ಧಕ್ಕೂ- ಇವತ್ತಿನ ಸಂದರ್ಭಕ್ಕೂ ಹೋಲಿಕೆ ಮಾಡಿ ನಾನು ಮಾತನಾಡುವುದಿಲ್ಲ. ಆಗಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ. ಟ್ರಂಪ್ ಟ್ವಿಟ್ ಬಗ್ಗೆಯಾಗಲಿ, ಪಾಕಿಸ್ತಾನದವರು ಮಾಡಿದ ಕದನ ವಿರಾಮ ಉಲ್ಲಂಘನೆಯ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ ಎಂದರು.

ADVERTISEMENT

ಯುದ್ಧ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು ಎಂದು ಹೇಳಿದರು.

ರಾಜ್ಯದಲ್ಲಿನ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಕಳುಹಿಸಿದ್ದೇವೆ‌. ಮೈಸೂರಿನಲ್ಲಿ ಮೂವರು ಮಕ್ಕಳು ಮಾತ್ರ ಇದ್ದಾರೆ. ಅವರನ್ನು ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇವೆ‌. ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವಳು. ಹೀಗಾಗಿ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಆದ್ದರಿಂದ ಮಕ್ಕಳು ಮಾತ್ರ ಇಲ್ಲೇ ಇದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸಚಿವ ಸಂಪುಟ ಪುನಾರಚನೆ ಬಗ್ಗೆ ಯಾಕೆ ಕೇಳುತ್ತೀರಾ? ಆ ಕೆಲಸ ನೀವು ಮಾಡ್ತಿರಾ? ಎಂದ ಮುಖ್ಯಮಂತ್ರಿ, ನಾನೇ ಮಾಡಬೇಕು. ನಿಮಗೆ (ಮಾಧ್ಯಮದವರಿಗೆ) ಹೇಳಿಯೇ ಮಾಡುತ್ತೇನೆ ಎಂದರು.

ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ. ಯುದ್ಧ ವಿರಾಮ ಘೋಷಣೆ ಆಗಿರುವ ಕಾರಣ ಈ ಕಾರ್ಯಕ್ರಮ ನಡೆಸುತ್ತೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ. ಇದೇ ನಮ್ಮ ಸರ್ಕಾರದ ಯಶಸ್ಸು ಎಂದರು.

ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಮುಖಂಡರಾದ ಸೀತಾರಾಮು, ಕೆ.ಮರೀಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.