ADVERTISEMENT

ರಾಜವಂಶಸ್ಥರಿಗೆ ₹3,400 ಕೋಟಿ ಟಿಡಿಆರ್ ಹಸ್ತಾಂತರಿಸಿ: ಸುಪ್ರೀಂ ಕೋರ್ಟ್‌ ತೀರ್ಪು

​ಪ್ರಜಾವಾಣಿ ವಾರ್ತೆ
Published 22 ಮೇ 2025, 7:06 IST
Last Updated 22 ಮೇ 2025, 7:06 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ 15.36 ಎಕರೆಗೆ ₹3,400 ಕೋಟಿ ಮೌಲ್ಯದ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರಗಳನ್ನು ಮೈಸೂರಿನ ರಾಜವಂಶಸ್ಥರಿಗೆ ಕೂಡಲೇ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇದರಿಂದಾಗಿ, ಟಿಡಿಆರ್‌ ನೀಡುವುದರಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸಿದ್ದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. 

ಈ ಸಂಬಂಧ ರಾಜ್ಯ ಸರ್ಕಾರದ ಎಲ್ಲ ವಾದಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಹಾಗೂ ಅರವಿಂದ ಕುಮಾರ್ ಅವರ ಪೀಠವು ಗುರುವಾರ ತೀರ್ಪು ಪ್ರಕಟಿಸಿತು. ಕರ್ನಾಟಕ ಸ್ಟ್ಯಾಂಪ್‌ ಕಾಯ್ದೆ ಹಾಗೂ ಹಿಂದಿನ ತೀರ್ಪುಗಳ ಅಡಿಯಲ್ಲಿ ಕಾನೂನು ಬಾಧ್ಯತೆಗಳನ್ನು ಗೌರವಿಸಬೇಕು ಎಂದು ಸ್ಪಷ್ಟಪಡಿಸಿತು. 

ADVERTISEMENT

ತೀರ್ಪು ಬರೆದ ನ್ಯಾಯಮೂರ್ತಿ ಕುಮಾರ್, ‘ರಾಜ್ಯವು ಈಗಾಗಲೇ ಠೇವಣಿ ಇಟ್ಟಿರುವ ಟಿಡಿಆರ್‌ಗಳು/ಡಿಆರ್‌ಸಿಗಳನ್ನು ಆಯಾ ಅರ್ಜಿದಾರರು ಅಥವಾ ಅವರ ಅಧಿಕೃತ ಪ್ರತಿನಿಧಿಗೆ ಅಫಿಡವಿಟ್‌ ಆಧಾರದಲ್ಲಿ ತಕ್ಷಣವೇ ರಿಜಿಸ್ಟ್ರಿ ಹಸ್ತಾಂತರಿಸಲು ಆದೇಶಿಸಲಾಗಿದೆ’ ಎಂದು ನಿರ್ದೇಶಿಸಿದ್ದಾರೆ.

‌ಮೈಸೂರು ರಾಜವಂಶಸ್ಥರ ಪರವಾಗಿ ವಕೀಲೆ ನಯನಾತಾರಾ ಬಿ.ಜಿ. ಹಾಗೂ ಇತರರು ಪ್ರತಿನಿಧಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಪೀಠ ವಿಲೇವಾರಿ ಮಾಡಿದೆ. 

ಅರಮನೆ ಮೈದಾನ ಒಟ್ಟು 472 ಎಕರೆ 16 ಗುಂಟೆ ಜಾಗ ಹೊಂದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಾನೂನುಬದ್ಧ ಉತ್ತರಾಧಿಕಾರಿ ಮತ್ತು ಇತರರು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಗಳು ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಆ ಆದೇಶದ ಪ್ರಕಾರ ಕರ್ನಾಟಕ ಸ್ಟ್ಯಾಂಪ್‌ ಕಾಯ್ದೆಯ ಸೆಕ್ಷನ್‌ 45 ಬಿ ಗೆ ಅನುಗುಣವಾಗಿ ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಅರಮನೆ ಜಾಗವನ್ನು ಮೌಲ್ಯೀಕರಿಸಿ, ವರ್ಗಾವಣೆ ಮಾಡಬಹುದಾದ ಟಿಡಿಆರ್‌ ನೀಡುವಂತೆ ನಿರ್ದೇಶನ ನೀಡಿತ್ತು.

ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸಬೇಕಾದ ಹೊರೆಯಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆಯ ಆಸರೆ ಪಡೆಯಲು ಸರ್ಕಾರ ತೀರ್ಮಾನಿಸಿತ್ತು. ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯ್ದೆ–1996ಕ್ಕೆ ಸಂಬಂಧಪಟ್ಟ ಸಿವಿಲ್‌ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಆ ಬಳಿಕ, ₹3,400 ಕೋಟಿಯ ಟಿಡಿಆರ್ ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಈ ಟಿಡಿಆರ್‌ಗಳನ್ನು ರಾಜವಂಶಸ್ಥರಿಗೆ ಹಸ್ತಾಂತರ ಮಾಡಬಾರದು ಎಂದು ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಪೀಠವು ಮೇ 1ರಂದು ತೀರ್ಪು ಕಾಯ್ದಿರಿಸಿತ್ತು. 

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್‌, ರಾಜೀವ್ ಧವನ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಹಾಗೂ ಇತರರು ವಾದಿಸಿದ್ದರು. 

ಹಿರಿಯ ವಕೀಲರಾದ ಎ.ಕೆ. ಗಂಗೂಲಿ, ರಾಕೇಶ್ ದ್ವಿವೇದಿ, ಮಾಧವಿ ದಿವಾನ್ ಮತ್ತು ಗೋಪಾಲ್ ಶಂಕರನಾರಾಯಣನ್, ‘ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತರು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಪೀಠವು 2024ರ ಡಿಸೆಂಬರ್‌ 10ರಂದು ಹೇಳಿತ್ತು’ ಎಂದು ಗಮನಕ್ಕೆ ತಂದಿದ್ದರು. ಈ ಅಧಿಕಾರಿಗಳು ವಿಚಾರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಪೀಠ ಸೂಚಿಸಿತ್ತು. 

ಸರ್ಕಾರದ ವಾದವೇನು?
‘ರಸ್ತೆ ವಿಸ್ತರಣೆಗೆ 1994ರಲ್ಲಿ ಭೂಸ್ವಾಧೀನ ಮಾಡಲಾಗಿತ್ತು. ಆದರೆ, ಮೌಲ್ಯಮಾಪನವನ್ನು 2004ರ ದರದ ಪ್ರಕಾರ ಮಾಡಲಾಗುತ್ತಿದೆ. 15 ಎಕರೆ ಜಾಗಕ್ಕೆ ಟಿಡಿಆರ್ ನೀಡಲು ಅನುಮತಿಸಿದರೆ, 472 ಎಕರೆಗಳ ಸಂಪೂರ್ಣ ಸ್ವಾಧೀನಕ್ಕೆ ಟಿಡಿಆರ್ ಮೊತ್ತ ಒಂದು ಲಕ್ಷ ಕೋಟಿಗೂ ಹೆಚ್ಚು ಆಗಲಿದೆ. ಇದರಿಂದ, ರಾಜ್ಯದ ಖಜಾನೆಗೆ ಭಾರಿ ಹೊರೆ ಬೀಳಲಿದೆ’ ಎಂದು ರಾಜ್ಯ ಸರ್ಕಾರದ ವಕೀಲರು ವಾದಿಸಿದ್ದರು. ‘ರಾಜ್ಯ ಹೈಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ತೀರ್ಪು ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಮೇಲ್ಮನವಿ ಅರ್ಜಿಯನ್ನು ಪೀಠ ವಿಚಾರಣೆ ನಡೆಸಬೇಕು’ ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.