ADVERTISEMENT

ಅರಮನೆ ಆಸ್ತಿ ವ್ಯಾಜ್ಯ: ತುರ್ತು ವಿಚಾರಣೆಗೆ ರಾಜ್ಯ ಅರ್ಜಿ

28 ವರ್ಷಗಳಿಂದ ನ್ಯಾಯಾಲಯದ ಮುಂದೆ ಬಾಕಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:33 IST
Last Updated 3 ಫೆಬ್ರುವರಿ 2025, 16:33 IST
   

ನವದೆಹಲಿ: ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ–1996 ಕ್ಕೆ ಸಂಬಂಧಪಟ್ಟ ಸಿವಿಲ್‌ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 

 ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ಈ ವಿಷಯವು 28 ವರ್ಷಗಳಿಂದ ನ್ಯಾಯಾಲಯದ ಮುಂದೆ ಬಾಕಿ ಇದೆ ಎಂದು ವಕೀಲರು ಹೇಳಿದರು. ಆದಾಗ್ಯೂ, ಅಗತ್ಯ ಕ್ರಮಕ್ಕಾಗಿ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸುವಂತೆ ನ್ಯಾಯಪೀಠವು ಸೂಚಿಸಿತು.

ADVERTISEMENT

ಅರಮನೆ ಮೈದಾನ ಪ್ರದೇಶದ ಬಳಕೆ ಮತ್ತು ನಿಯಂತ್ರಣದ ಅಧಿಕಾರವನ್ನು ರಾಜ್ಯ ಸರ್ಕಾರದ ಬಳಿಯೇ ಇಟ್ಟುಕೊಳ್ಳುವ ಉದ್ದೇಶಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆ ಇತ್ತೀಚೆಗೆ ತೀರ್ಮಾನಿಸಿತ್ತು. 

ಅರಮನೆ ಮೈದಾನ ಒಟ್ಟು 472 ಎಕರೆ 16 ಗುಂಟೆ ಜಾಗ ಹೊಂದಿದೆ. ನ್ಯಾಯಾಂಗ ನಿಂದನೆ ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಆ ಆದೇಶದ ಪ್ರಕಾರ ಕರ್ನಾಟಕ ಸ್ಟಾಂಪ್‌ ಕಾಯ್ದೆಯ ಸೆಕ್ಷನ್‌ 45 ಬಿ ಗೆ ಅನುಗುಣವಾಗಿ ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಅರಮನೆ ಜಾಗವನ್ನು ಮೌಲ್ಯೀಕರಿಸಿ, ವರ್ಗಾವಣೆ ಮಾಡಬಹುದಾದ ಟಿಡಿಆರ್‌ ನೀಡುವಂತೆ ನಿರ್ದೇಶನ ನೀಡಿತ್ತು.

ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಬಳಕೆಯಾಗುವ 15.36 ಎಕರೆ ಭೂಮಿಗೆ ಪರಿಹಾರವಾಗಿ ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) ₹3,014 ಕೋಟಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸಬೇಕಾದ ಹೊರೆಯಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆಯ ಆಸರೆ ಪಡೆಯಲು ಸರ್ಕಾರ ತೀರ್ಮಾನಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.