ಸುವರ್ಣ ವಿಧಾನಸೌಧ (ಬೆಳಗಾವಿ): ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಅಡಿ ಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಪಂಚಮಸಾಲಿ ಹೋರಾಟಗಾರರನ್ನು ಮನವೊಲಿಸಲು ವಿಫಲರಾದ ತಮ್ಮ ಸಂಪುಟದ ಸದಸ್ಯರೊಬ್ಬರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.
‘ಐದು ಸಾವಿರ ಟ್ರ್ಯಾಕ್ಟರ್‌ಗಳ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹಲವು ದಿನಗಳ ಮೊದಲೇ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ನೀವು ಹಲವು ಬಾರಿ ಹೋಗಿ ಮೀಸಲಾತಿ ಹೋರಾಟಕ್ಕೆ ಬೆಂಬಲ ತಿಳಿಸಿ ಬಂದಿದ್ದೀರಿ. ಆದರೆ, ಅವರ ಮನವೊಲಿಸಿ ಪ್ರತಿಭಟನೆಯಿಂದ ಹಿಂದೆಸರಿಯುವಂತೆ ಮಾಡಿಲ್ಲ’ ಎಂದು ಸಚಿವರ ನಡವಳಿಕೆಗೆ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
‘ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿಯೂ ಸರ್ಕಾರದ ಪರ ಡಾ. ಎಚ್.ಸಿ. ಮಹದೇವಪ್ಪ, ಡಾ. ಎಂ.ಸಿ. ಸುಧಾಕರ್, ಕೆ. ವೆಂಕಟೇಶ್ ಅವರನ್ನು ಕಳುಹಿಸಲಾಗಿತ್ತು. ಹೋರಾಟ ನಿರತರ ಪೈಕಿ ಹತ್ತು ಮಂದಿಯನ್ನು ಮಾತುಕತೆಗೆ ಕರೆದುಕೊಂಡು ಬರುವಂತೆಯೂ ನಿಮಗೆ ತಿಳಿಸಿದ್ದೆ. ಆದರೆ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಹಿಂಸಾತ್ಮಕ ಸ್ವರೂಪಕ್ಕೆ ತಿರುಗುವವರೆಗೂ ನೀವು ಅವರಿಗೆ ಮಾಹಿತಿ ನೀಡಿಲ್ಲ. ನೀವು ಹೋರಾಟದ ಭಾಗವಾಗಿದ್ದರೂ ಪ್ರತಿಭಭಟನಕಾರರ ಮನವೊಲಿಸಲು ನಿಮ್ಮಿಂದ ಸಾಧ್ಯ ಆಗಿಲ್ಲ. ಸಚಿವರು ಸರ್ಕಾರದ ಭಾಗ ಎಂಬುದನ್ನು ಮರೆಯಬಾರದು’ ಎಂದು ಮುಖ್ಯಮಂತ್ರಿ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ ಎಂದೂ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.