ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ‘ಪಂಚಮಸಾಲಿ ಸಮಾಜದವರೇ ಆದ ಶಾಸಕರೊಬ್ಬರು ಕುಮ್ಮಕ್ಕು ನೀಡಿ ಲಾಠಿಚಾರ್ಜ್ ಮಾಡಿಸಿದ್ದಾರೆ. ಇದಕ್ಕೆ ಸುವರ್ಣ ವಿಧಾನಸೌಧದ ಒಳಗಿನ ಸಿಟಿಟಿವಿ ಕ್ಯಾಮೆರಾಗಳೇ ಸಾಕ್ಷಿ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.
ಲಾಠಿಚಾರ್ಜ್ ಖಂಡಿಸಿ ಇಲ್ಲಿನ ಸುವರ್ಣ ವಿಧಾನಸೌದದ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ಕೂಡ ಬಂದ್ ಮಾಡಿದ ವೇಳೆ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
‘ನಮ್ಮ ಸಮಾಜದ ಶಾಸಕರೊಬ್ಬರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಅವರು ಯಾರೆಂದು ನಾನು ಹೆಸರು ಹೇಳುವುದಿಲ್ಲ. ಅಂಥವರ ಹೆಸರು ಹೇಳಿ ನನ್ನ ನಾಲಿಗೆಯನ್ನು ಹೊಲಸು ಮಾಡಿಕೊಳ್ಳುವುದಿಲ್ಲ’ ಎಂದೂ ಕಿಡಿ ಕಾರಿದರು.
‘ಬಸವಣ್ಣನ ಕಾಲದಲ್ಲಿ ಕೊಂಡಿ ಮಂಚಣ್ಣನಂಥವರು ಇದ್ದರು. ರಾಣಿ ಚನ್ನಮ್ಮನ ಕಾಲದಲ್ಲಿ ಮಲ್ಲಪ್ಪಶೆಟ್ಟಿ ಅಂಥವರು ಇದ್ದರು. ನಮ್ಮ ಕಾಲದಲ್ಲೂ ನಮ್ಮದೇ ಸಮಾಜದಲ್ಲಿ ಅಂಥವರು ಇದ್ದಾರೆ’ ಎಂದರು.
‘ತಮ್ಮ ಸಚಿವ ಸ್ಥಾನಕ್ಕಾಗಿ ಆ ಶಾಸಕ ಸಮಾಜದ ವಿರುದ್ಧವೇ ಕುಮ್ಮಕ್ಕು ನಡೆಸಿದ್ದಾರೆ. ಅವರು ಲಾಠಿಚಾರ್ಜ್ ಮಾಡಿಸಲಿ, ಗೋಲಿಬಾರ್ ಮಾಡಿಸಲಿ. ತಾವು ಸಚಿವ ಸ್ಥಾನ ಪಡೆದು ಅರಾಮವಾಗಿರಲಿ. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ನಮಗಿದೆ. ಸಮಾಜದಲ್ಲಿ ಒಬ್ಬ ಮಲ್ಲಪ್ಪಶೆಟ್ಟಿ ಇದ್ದರೆ ಏನಾಯಿತು. 1 ಕೋಟಿ, 29 ಲಕ್ಷ 99,999 ಮಂದಿ ಕ್ರಾಂತಿಕಾರಿಗಳು ಇದ್ದಾರೆ’ ಎಂದೂ ಹೇಳಿದರು.
‘ಹೆದ್ದಾರಿ ಮೇಲೆ ರಕ್ತ ಚೆಲ್ಲುವಂತೆ ಹೊಡೆಸಿದ್ದೀರಿ. ಆ ರಕ್ತದ ಕಣಕಣಕ್ಕೂ ಬೆಲೆ ಕಟ್ಟಬೇಕಾಗುತ್ತದೆ’ ಎಂದರು.
ನೇತೃತ್ವ ವಹಿಸಿದ್ದ ಮಹಿಳಾ ನಾಯಕಿ, ಶಾಸಕ ಬಾಬಾಸಾಹೇಬ ಪಾಟೀಲ ಅವರ ಪತ್ನಿ, ರೋಹಿಣಿ ಮಾತನಾಡಿ, ‘ಮುಗ್ದರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಜೆಗಳಿಗೆ ಆಯ್ಕೆಯಾದ ಸಿದ್ದರಾಮಯ್ಯ ಅವರು ಪ್ರಜೆಗಳನ್ನೇ ಮರೆತಿದ್ದಾರೆ. ಕಿಂಚಿತ್ತಾದರೂ ಕಣಿಕರ ಇದ್ದರೆ 2ಎ ಹಾಗೂ ಒಬಿಸಿ ಮೀಸಲಾತಿ ನೀಡಬೇಕು' ಎಂದರು.
ಮಹಿಳಾ ನಾಯಕಿ ಶಿಲ್ಪಾ ಗೋದಿಗೌಡರ ಮಾತನಾಡಿ, 'ಬೆರಳೆಣಿಕೆಯಷ್ಟು ಮುಸ್ಲಿಮರು ಹೋರಾಟ ಮಾಡಿದರೆ ಸಿದ್ದರಾಮಯ್ಯ ಓಡಿ ಹೋಗುತ್ತಾರೆ. ಲಕ್ಷಾಂತರ ಪಂಚಮಸಾಲಿ ಹೋರಾಟಗಾರರಿಗೆ ಬೆಲೆ ಕೊಡಲಿಲ್ಲ. ಇದು ಲಿಂಗಾಯತ ವಿತೋಧಿ ಧೋರಣೆ. ಸಿದ್ದರಾಮಯ್ಯ ಕ್ಷಮೆ ಕೇಳಲೇಬೇಕು' ಎಂದು ಕಿಡಿ ಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.