ಸಿದ್ದರಾಮಯ್ಯ
–ಪ್ರಜಾವಾಣಿ ಚಿತ್ರ
ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎಗೆ ಸೇರಿಸಲೇಬಾರದು ಎಂದು ಆಗ್ರಹಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಅವರನ್ನು ಬುಧವಾರ ಭೇಟಿ ಮಾಡಿದ ಒಕ್ಕೂಟದ ಪದಾಧಿಕಾರಿಗಳು, ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಪರಿಗಣಿಸಿದರೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿಯಲ್ಲಿ ಏನಿದೆ?: ಪಂಚಮಸಾಲಿ ಲಿಂಗಾಯತ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರಿದಿದೆ. ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು, ವೆಂಕಟಸ್ವಾಮಿ, ನ್ಯಾಯಮೂರ್ತಿ ಒ. ಚಿನ್ನಪ್ಪರೆಡ್ಡಿ ವರದಿ ಸೇರಿದಂತೆ ಎಲ್ಲ ವರದಿಗಳಲ್ಲೂ ಪಂಚಮಸಾಲಿ ಸಮುದಾಯವು ಮುಂದುವರಿದ ಸಮಾಜ ಎಂದು ದಾಖಲಿಸಲಾಗಿದೆ.
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿಯಲ್ಲಿ ಸೇರಿಸಿದರೆ, ಹಾಲಿ ಇರುವ ಪ್ರವರ್ಗ-2ಎ ಅಡಿ ಬರುವ ತೀರಾ ಹಿಂದುಳಿದ ಜಾತಿಗಳಾದ ಅಗಸ, ಸವಿತಾ, ತಿಗಳ, ಈಡಿಗ, ಕುರುಬ, ದೇವಾಂಗ ಸೇರಿದಂತೆ ಇತರೆ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವುದಿಲ್ಲ. ಪಂಚಮಸಾಲಿ ಸಮುದಾಯವೇ ಎಲ್ಲ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳುತ್ತದೆ. ಇದರಿಂದ ಪ್ರವರ್ಗ 2ಎಯಲ್ಲಿ ಇರುವ ಜಾತಿಗಳಿಗೆ ಮೀಸಲಾತಿಯೇ ಸಿಗುವುದಿಲ್ಲ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.