ADVERTISEMENT

ಪಂಚಮಸಾಲಿ ಮೀಸಲಾತಿ: ಎರಡು ತಿಂಗಳಲ್ಲಿ ಕ್ರಮ– ಬಸವರಾಜ ಬೊಮ್ಮಾಯಿ

ಸಿಎಂ ಮನೆ ಮುಂದೆ ಧರಣಿ ತೀರ್ಮಾನ ಕೈ ಬಿಟ್ಟ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 17:59 IST
Last Updated 22 ಜೂನ್ 2022, 17:59 IST
   

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಸಂಬಂಧ ಇನ್ನೆರಡು ತಿಂಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಬುಧವಾರ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಸಮಾಜದ ಮುಖಂಡರ ಜತೆ ಸಂಧಾನ ನಡೆಸಿದರು. ಮುಖ್ಯಮಂತ್ರಿ ಭರವಸೆ ಮತ್ತು ಸಚಿವರ ಸಂಧಾನದ ಪರಿಣಾಮ ಮುಖ್ಯಮಂತ್ರಿಯವರ ಮನೆ ಮುಂದೆ ಸ್ವಾಮೀಜಿ ನಡೆಸಲು ಉದ್ದೇಶಿಸಿದ್ದ ಧರಣಿ ನಿರ್ಧಾರವನ್ನು ಕೈಬಿಟ್ಟರು.

ಸಚಿವ ಸಿ.ಸಿ.ಪಾಟೀಲ ಅವರ ಮನೆಯಲ್ಲಿ ಬೆಳಿಗ್ಗೆಯಿಂದ ಈ ಸಂಬಂಧ ಸರಣಿ ಸಭೆಗಳು ನಡೆದವು. ಸಭೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಜಯಮೃತ್ಯುಂಜಯ ಸ್ವಾಮೀಜಿಯವರ ಜತೆ ಗುರುತಿಸಿಕೊಂಡವರೇ ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ‘ಮೀಸಲಾತಿಯನ್ನು ಕೂಡಲೇ ಪ್ರಕಟಿಸಬೇಕು’ ಎಂದು ಕೆಲವರು ಸಭೆಯಲ್ಲಿ ಆಗ್ರಹಿಸಿದರು. ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದ ಕಾರಣ, ಮುಖ್ಯಮಂತ್ರಿ ಜತೆ ಚರ್ಚಿಸುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂತು.

ADVERTISEMENT

ಆ ಬಳಿಕ ಸಚಿವ ಸಿ.ಸಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಇತರರು ಬೊಮ್ಮಾಯಿ ಅವರನ್ನು ಶಕ್ತಿಭವನದಲ್ಲಿ ಭೇಟಿ ಮಾಡಿದರು. ‘ಸರ್ಕಾರ ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಿದೆ ಎಂಬ ಭಾವನೆ ಬಂದಿದೆ. ಸಮುದಾಯದ ಜನರೂ ಸರ್ಕಾರದ ಮೇಲೆ ಆಕ್ರೋಶಗೊಂಡಿದ್ದಾರೆ’ ಎಂಬುದನ್ನು ಅವರ ಗಮನಕ್ಕೆ ತಂದರು.

ಈ ಆಗ್ರಹಕ್ಕೆ ಪ‍್ರತಿಕ್ರಿಯಿಸಿದ ಬೊಮ್ಮಾಯಿ, ‘ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ. ಆದರೆ, ಕಾನೂನಿನ ತೊಡಕುಗಳಿವೆ. ಇದಕ್ಕಾಗಿ ಸಮಯಾವಕಾಶ ಬೇಕು. ಎರಡು ತಿಂಗಳ ಸಮಯ ಕೊಡಿ, ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. ಈ ಮಾಹಿತಿಯನ್ನು ಸ್ವಾಮಿಜಿಯವರಿಗೆ ತಿಳಿಸಿದ ಬಳಿಕ ಧರಣಿಯನ್ನು ಕೈಬಿಡಲು ಸಮ್ಮತಿ ಸೂಚಿಸಿದರು.

ಮುಖ್ಯಮಂತ್ರಿ ಜತೆಗಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿ.ಸಿ.ಪಾಟೀಲ, 2 ಎ ಮೀಸಲಾತಿಗೆ ಒತ್ತಾಯಿಸಿ ಸ್ವಾಮೀಜಿ ಪಾದಯಾತ್ರೆ ನಡೆಸಿದರು. ನಿರಂತರ ಹೋರಾಟ ಮತ್ತು ಸಮಾವೇಶಗಳನ್ನೂ ಮಾಡಿದರು. ಇವೆಲ್ಲದರ ಫಲವಾಗಿ ಸದ್ಯವೇ ಸಿಹಿ ಸುದ್ದಿ ಸಿಗಲಿದೆ ಎಂದರು.

ಶಾಸಕ ಯತ್ನಾಳ್‌ ಗಡುವು

‘ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಎರಡು ತಿಂಗಳಲ್ಲಿ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ, ಆಗಸ್ಟ್‌ 22 ರವರೆಗೆ ಕಾಯುತ್ತೇವೆ. ಆಗಲೂ ಆಗಿಲ್ಲ ಎಂದರೆ ಬೊಮ್ಮಾಯಿ ಮನೆ ಮುಂದೆ ನಾನೇ ಧರಣಿ ಕೂರುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಎಚ್ಚರಿಕೆ ನೀಡಿದರು.

ಭರವಸೆಯನ್ನು ನಂಬಿದ್ದೇವೆ: ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗಾರರ ಜತೆ ಮಾತನಾಡಿ, ‘ಮುಖ್ಯಮಂತ್ರಿ ಮನೆ ಮುಂದೆ ಹೋರಾಟ ಮಾಡಲು ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಸಾಕಷ್ಟು ಸಭೆಗಳನ್ನೂ ನಡೆಸಿದ್ದೆವು. ಎರಡು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವ ನಿರ್ಧಾರ ಕೈಬಿಟ್ಟಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.