ADVERTISEMENT

ದಾರಿ ತಪ್ಪಿದ ಪಂಚಮಸಾಲಿ ಹೋರಾಟ: ಡಾ.ರವಿಕುಮಾರ ಬಿರಾದಾರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 13:23 IST
Last Updated 15 ಡಿಸೆಂಬರ್ 2024, 13:23 IST
<div class="paragraphs"><p>ಡಾ. ರವಿಕುಮಾರ ಬಿರಾದಾರ</p></div>

ಡಾ. ರವಿಕುಮಾರ ಬಿರಾದಾರ

   

ವಿಜಯಪುರ: ‘ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಆರ್.ಎಸ್.ಎಸ್ ಮತ್ತು ಬಿಜೆಪಿ ಮಧ್ಯಪ್ರವೇಶದಿಂದ ಸಂಪೂರ್ಣ ದಾರಿ ತಪ್ಪಿದೆ’ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಂಚಮಸಾಲಿ ಸಮಾಜದ ಮುಖಂಡ ಡಾ. ರವಿಕುಮಾರ ಬಿರಾದಾರ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೋರಾಟದ ಹೆಸರಿನಲ್ಲಿ ರಾಜ್ಯ ಸರ್ಕಾರವನ್ನು ಹಾಗೂ ಪಂಚಮಸಾಲಿ ಸಮಾಜದ ಸಚಿವರು, ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದಾರೆ’ ಎಂದು ದೂರಿದರು.

ADVERTISEMENT

‘ಮೀಸಲಾತಿ ಹೋರಾಟದಲ್ಲಿ ನಿರತ ಸಮಾಜವನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಸ್ವಾಮೀಜಿ ಮಾಡುತ್ತಿದ್ದಾರೆ. ಕಾವಿ ಮರ್ಯಾದೆ, ಪಂಚಮಸಾಲಿ ಸಮಾಜದ ಮರ್ಯಾದೆ ತೆಗೆಯುವ ಕೆಲಸ ಸ್ವಾಮೀಜಿ ಮಾಡಬಾರದು, ತಮ್ಮ ಲಾಭಕ್ಕಾಗಿ ಪಂಚಮಸಾಲಿಗಳನ್ನು ಬಿಜೆಪಿ, ಆರ್.ಎಸ್.ಎಸ್ ಗೆ ಅಡ ಇಡಬಾರದು' ಎಂದು ಹೇಳಿದರು.

‘ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರ್‌ಎಸ್ಎಸ್‌ ಒಡ್ಡಿದ ಆಮಿಷಕ್ಕೆ ಒಳಗಾಗಿ ಬಿಜೆಪಿ ಪರ ಮತ ಚಲಾಯಿಸಲು ಕರೆ ಕೊಟ್ಟಿದ್ದರು. ಆದರೆ, ಸಮಾಜ ಅವರ ಮಾತನ್ನು ತಿರಸ್ಕರಿಸಿತ್ತು’ ಎಂದು ಹೇಳಿದರು.

‘ಪಂಚಮಸಾಲಿ ಸಮಾಜಕ್ಕೆ ಸೇರಿದ ಕಾಂಗ್ರೆಸ್‌ನ ಅನೇಕ ಸಚಿವರು, ಶಾಸಕರು ಸ್ವಾಮೀಜಿ ಅವರ ಬ್ಲ್ಯಾಕ್ ಮೇಲ್ ಗೆ ಅಂಜಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು.

‘ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೆದರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಅವರ ತಂದೆ ಕಾಲದಿಂದಲೂ ಅವರ ಕುಟುಂಬ ಪಂಚಮಸಾಲಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸ್ವಾಮೀಜಿ ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ವಂಚಿತವಾಗಿರುವ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬೇರೊಬ್ಬರ ಮೀಸಲಾತಿ ಕಿತ್ತುಕೊಡುವ ಅಗತ್ಯ ಇಲ್ಲ’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ನಡೆದ ಲಾಠಿ ಚಾರ್ಜ್‌ಗೂ ಮುನ್ನಾ ಪ್ರತಿಭಟನಾಕಾರರ ನಡುವೆ ಸೇರಿಕೊಂಡ ಆರ್‌ಎಸ್‌ಎಸ್‌, ಬಿಜೆಪಿಯವರೇ ಪೊಲೀಸರ ಮೇಲೆ ಕಲ್ಲೆಸೆದು ಸಮಾಜದವರ ಮೇಲೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದರು.

‘ದೇಶದಲ್ಲಿ ಶೇ 3ರಷ್ಟು ಇರುವ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ತೆಗೆದುಕೊಂಡಿದ್ದಾರೆ. ಸ್ವಾಮೀಜಿ ಅವರು ಪಂಚಮಸಾಲಿ ಸಮಾಜಕ್ಕೆ ಇಡಬ್ಲ್ಯು ಎಸ್‌ನಲ್ಲಿ ಮೀಸಲಾತಿ ಕೊಡಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.