ADVERTISEMENT

ಪಂಚಾಯತ್‌ ವ್ಯವಸ್ಥೆ ದುರ್ಬಲ: ವಿರೋಧ ಪಕ್ಷಗಳ ಆತಂಕ

ಪಂಚಾಯತ್ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ದಾರಿ ಸುಗಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:45 IST
Last Updated 17 ಸೆಪ್ಟೆಂಬರ್ 2021, 16:45 IST
ವಿಧಾನ ಪರಿಷತ್‌ನ ಸಾಂದರ್ಭಿಕ ಚಿತ್ರ
ವಿಧಾನ ಪರಿಷತ್‌ನ ಸಾಂದರ್ಭಿಕ ಚಿತ್ರ    

ಬೆಂಗಳೂರು: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸೀಮಾ ನಿರ್ಣಯ ಆಯೋಗವೊಂದನ್ನು ನೇಮಿಸುವ ಪ್ರಸ್ತಾವವಿರುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ–2021’ ರಾಜ್ಯದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನೇ ದುರ್ಬಲಗೊಳಿಸಲಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಆತಂಕ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಸೂದೆಯನ್ನು ಪರಿಷತ್‌ನಲ್ಲಿ ಮಂಡಿಸಲಾಯಿತು.

‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಏಕೈಕ ಉದ್ದೇಶದಿಂದ ಈ ಮಸೂದೆ ತರಲಾಗಿದೆ’ ಎಂದು ದೂರಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು, ಈ ತಿದ್ದುಪಡಿಯು ಪಂಚಾಯತ್‌ ರಾಜ್‌ ಸಂಸ್ಥೆಗಳ ಚುನಾವಣೆಯಲ್ಲಿ ಅಡಳಿತ ಪಕ್ಷದ ಅತಿಯಾದ ಹಸ್ತಕ್ಷೇಪಕ್ಕೆ ಎಡೆಮಾಡಲಿದೆ’ ಎಂದರು.

ADVERTISEMENT

ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ‘ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರವನ್ನು ಸರ್ಕಾರ ಪರೋಕ್ಷವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಏಕೈಕ ಉದ್ದೇಶದಿಂದ ಇಂತಹ ಕೆಟ್ಟ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ಇದು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯ ಲಿದೆ’ ಎಂದು ವಾಗ್ದಾಳಿ ನಡೆಸಿದರು.

ಕತ್ತು ಹಿಸುಕುವ ಕೆಲಸ: ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ‘ರಾಜ್ಯ ಸರ್ಕಾರವೇ ಚುನಾವಣಾ ಆಯೋಗದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಯಲ್ಲಿ ಲೋಪ ಆಗಿದ್ದರೆ ಅದನ್ನು ಸರಿಪಡಿಸಬೇಕಿತ್ತು. ಬದಲಿಗೆ ಶೂನ್ಯದಿಂದ ಕೆಲಸ ಆರಂಭಿಸಿದರೆ ಪಂಚಾಯತ್‌ ರಾಜ್‌ ಸಂಸ್ಥೆಗಳು ಬಲಹೀನವಾಗುತ್ತವೆ’ ಎಂದರು.

‘ಈ ಮಸೂದೆಯ ಮೂಲಕ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತ ಸಮುದಾಯಗಳ ಜನರನ್ನು ಚುನಾವಣಾ ರಾಜಕಾರಣದಿಂದ ಹೊರ ಗಿಡುವ ಹುನ್ನಾರ ಅಡಗಿದೆ. ಹೊಸ ಆಯೋಗದ ಮೂಲಕ ಕ್ಷೇತ್ರ ಪುನರ್‌ ವಿಂಗಡಣೆ ಆದರೆ ಹಿಂದುಳಿದ ವರ್ಗ ಗಳು ಮತ್ತು ಅಲ್ಪಸಂಖ್ಯಾತರು ಹೆಚ್ಚು ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಕ್ಷೇತ್ರ ಗಳನ್ನು ಛಿದ್ರಗೊಳಿಸಿ ಅವರನ್ನು ರಾಜಕೀಯದ ಮುಖ್ಯವಾಹಿನಿಯಿಂದ ದೂರ ಇಡಲಾಗುತ್ತದೆ’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

ಮಸೂದೆ ವಿರೋಧಿಸಿದ ಕಾಂಗ್ರೆಸ್‌ನ ಕೆ. ಪ್ರತಾಪಚಂದ್ರ ಶೆಟ್ಟಿ, ‘ಬಿಜೆಪಿಗೆ ಅನುಕೂಲಕರವಾಗುವಂತೆ ಕ್ಷೇತ್ರಗಳ ವಿಂಗಡಣೆ ಮತ್ತು ಮೀಸಲಾತಿ ನಿಗದಿಯ ದುರುದ್ದೇಶ ಈಡೇರಿಸಿಕೊಳ್ಳಲು ಈ ಮಸೂದೆ ತರಲಾಗಿದೆ. ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಚುನಾವಣೆಯಲ್ಲಿ ಜಿ.ಪಂ. ಮತ್ತು ತಾ.ಪಂ. ಸದಸ್ಯರು ಮತ ಚಲಾಯಿಸದಂತೆ ತಡೆಯುವ ಉದ್ದೇಶವೂ ಇದರಲ್ಲಿದೆ’ ಎಂದರು.

ಕಾಂಗ್ರೆಸ್‌ನ ಆರ್‌.ಬಿ. ತಿಮ್ಮಾಪೂರ, ಸಿ.ಎಂ. ಇಬ್ರಾಹಿಂ, ಯು.ಬಿ. ವೆಂಕಟೇಶ್‌, ಪಿ.ಆರ್. ರಮೇಶ್, ಜೆಡಿಎಸ್‌ನ ಅಪ್ಪಾಜಿಗೌಡ, ರಮೇಶ್‌ ಗೌಡ, ಎಸ್‌.ಎಲ್‌. ಭೋಜೇಗೌಡ ಮಸೂದೆ ವಿರೋಧಿಸಿ ಮಾತನಾಡಿದರು. ಬಿಜೆಪಿಯ ತೇಜಸ್ವಿನಿ ಗೌಡ ಮಸೂದೆ ಬೆಂಬಲಿಸಿ ಮಾತನಾಡಿದರು.

ಸಭಾತ್ಯಾಗದ ನಡುವೆಯೇ ಅಂಗೀಕಾರ

‘ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಈ ತಿದ್ದುಪಡಿ ಮಸೂದೆ ತರಲಾಗಿದೆ. ಇದರ ಹಿಂದೆ ಯಾವ ದುರುದ್ದೇಶವೂ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಸಮಜಾಯಿಷಿ ನೀಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ‘ಚುನಾವಣಾ ಆಯೋಗ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸುವ ವ್ಯವಸ್ಥೆ ಹಿಂದೆ ಇರಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ತಿದ್ದುಪಡಿ ತರಲಾಗಿತ್ತು. ಅದರಿಂದ ಆಗಿರುವ ಕಾನೂನು ತೊಡಕು ನಿವಾರಣೆಗೆ ತಿದ್ದುಪಡಿ ತರಲಾಗುತ್ತಿದೆ’ ಎಂದು ವಿಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಸಭಾತ್ಯಾಗದ ನಡುವೆಯೇ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

****

ಕೆ.ಎಸ್‌. ಈಶ್ವರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿತ್ತು. ಅವರಿಗೆ ಕೆಟ್ಟ ಹೆಸರು ತರಲು ಈ ಮಸೂದೆ ರೂಪಿಸಲಾಗಿದೆ

– ಎಸ್‌. ರವಿ, ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.